ಬಳ್ಳಾರಿ ; ರಸಗೊಬ್ಬರ ಪೂರೈಕೆ, ಉತ್ಪಾದನೆಯ ಹೊಣೆ ಕೇಂದ್ರ ಸರ್ಕಾರದ್ದು ಎಂಬ ಕನಿಷ್ಠ ಜ್ಞಾನ ನಮ್ಮ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಇದ್ದಂತೆ ಕಾಣುತ್ತಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಪತ್ರಿಕಾ ಪ್ರಕಟಣೆ ಮೂಲಕ ಟೀಕಿಸಿದ್ದಾರೆ.
ರಾಸಯನಿಕ ಗೊಬ್ಬರ ಪೂರೈಕೆ ಮಾಡುವ ಕೆಲಸ ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರಕ್ಕೆ ದೇಶದಲ್ಲಿರುವ ಕೃಷಿ ವಿಷಯ ತಿಳಿದೆ ಇಲ್ಲ. ಎಷ್ಟು ಗೊಬ್ಬರ, ಬೀಜ ಬೇಕು ಎಂಬುದರ ಬಗ್ಗೆ ಪೂರ್ಣ ಜ್ಞಾನ ಇಲ್ಲ. ಇದೆ ಕಾರಣಕ್ಕೆ ಇಂದು ಗೊಬ್ಬರ ಕೊರತೆ ಎದುರಾಗಿದೆ.
ಯಾವುದೋ ಮತ್ತೊಂದು ಕಾರ್ಪೊರೇಟ್ ಕಂಪನಿಗೆ ಒಳಿತಿಗಾಗಿ ನ್ಯಾನೋ ಗೊಬ್ಬರ ಉತ್ಪಾದಿಸಿ ಅದನ್ನು ಮಾರಾಟ ಮಾಡಿ, ಲಾಭ ಗಳಿಸುವ ಹುನ್ನಾರದಿಂದ ಈ ರೀತಿ ರೈತರಿಗೆ ವಂಚನೆ ಮಾಡುವ ಕೆಲಸವನ್ನು ತಮ್ಮ ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದನ್ನು ಬಿ.ಶ್ರೀರಾಮುಲು ಅವರು ತಿಳಿಯಬೇಕು.
ಇನ್ನು ಈ ವರ್ಷ (ಮಾರ್ಚ್ ವರೆಗೆ) ರಾಜ್ಯದಲ್ಲಿ 527 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ 28 ಮಂದಿಯನ್ನು ಹೊರತುಪಡಿಸಿ ಇನ್ನೆಲ್ಲರಿಗೂ ಪರಿಹಾರ ಸಿಕ್ಕಿದೆ. ಆದರೆ, ಮೃತ ರೈತರಿಗೆ ಪರಿಹಾರವೇ ಸಿಗುತ್ತಿಲ್ಲ ಎಂಬ ಶ್ರೀರಾಮುಲು ಆರೋಪಕ್ಕೆ ಆಧಾರವೇ ಇಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿಬೇಡವೇ? ಎಂದು ಪ್ರಶ್ನಿಸಿದ್ದಾರೆ.