ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಭಾನುವಾರ ಸಂಜೆ ಹೊನಲು ಬೆಳಕಿನ ಫುಟ್ಬಾಲ್ ಲೀಗ್ ಪಂದ್ಯಾವಳಿ ಜರುಗಿತು. 
ಜಿಲ್ಲೆ

ಕ್ರೀಡೆಯಿಂದ ಸದೃಢತೆ ಲಭ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅನಿಸಿಕೆ

ಬಳ್ಳಾರಿ: ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ಡಾ.ರಾಜಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.

ಯುವಕರು ಆಟ ಆಡುವುದರಿಂದ ದೇಹದ ಎಲ್ಲ ಅಂಗಾಂಗಗಳು ಕ್ರಿಯಾಶೀಲಗೊಳ್ಳುತ್ತವೆ ಎಂದ ಅವರು, ಖ್ಯಾತ ಫುಟ್ಬಾಲ್ ಆಟಗಾರರಾದ ರೊನಾಲ್ಡೋ ಹಾಗೂ ಸುನೀಲ್ ಛೆಟ್ರಿ ಅವರ ಆಟದ ಶೈಲಿಗಳನ್ನು ನೆನಪಿಸಿದರು. ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಬಹಳ ವರ್ಷಗಳ ನಂತರ ಬಳ್ಳಾರಿಯಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಪಾಲಿಕೆಯ ಮೇಯರ್ ರಾಜೇಶ್ವರಿ, ಮಾಜಿ ಸಂಸದೆ ಜೆ.ಶಾಂತ, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅದಾವತ್, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್ ಇತರರು ಇದ್ದರು.ಅಕ್ಟೋಬರ್ 2 ರಿಂದ ಆರಂಭವಾದ ಈ ಪಂದ್ಯಾವಳಿ 9ರ ವರೆಗೆ ನಿತ್ಯ ಸಂಜೆ 4 ರಿಂದ 8 ಗಂಟೆಯವರೆಗೆ ನಡೆಯಲಿವೆ. ಒಟ್ಟು 16 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಿದ್ದು, ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.