ಜಿಲ್ಲೆ

ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯಕ

ಬಳ್ಳಾರಿ : ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗಳು ಅತ್ಯಾವಶ್ಯಕವಾಗಿದ್ದು ಜೀವನವನ್ನು ಸಮೃದ್ಧಗೊಳಿಸುತ್ತವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಕ್ರೀಡಾ ದಿನ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಯುವಪೀಳಿಗೆಯು ತಪ್ಪದೇ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು. ದೈನಂದಿನ ಜೀವನದಲ್ಲಿ ಕ್ರೀಡೆಗಳು ಶಾರೀರಿಕ ಆರೋಗ್ಯದ ಅವಿಭಾಜ್ಯ ಅಂಗವಾಗಿವೆ ಎಂದರು.

ಧ್ಯಾನ್ ಚಂದ ಅವರು ಹಲವು ಪೀಳಿಗೆಯವರಿಗೆ ಪ್ರೇರಣೆಯಾಗಿದ್ದವರು. ಜಿಲ್ಲೆಯ ವಿವಿಧ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಟಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಲಾಗುವುದು ಎಂದರು.

ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಕುಡಿವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ವಿವಿಧ ಕ್ರೀಡೆಗಳು ಜರುಗಿದವು.