ಬಳ್ಳಾರಿ: ನಗರದ ಸ್ಲಂ ನಿವಾಸಿಗಳಿಗೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಬಡಜನರಿಗೆ ಸೂರು ಕಲ್ಪಿಸುವ ಸಲುವಾಗಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೋಮವಾರ ಹಕ್ಕುಪತ್ರಗಳನ್ನು ವಿತರಿಸಿದರು. ಎಲ್ಲ ಜನಾಂಗದ ಬಡವರಿಗೆ ಅನುಕೂಲವಾಗುವಂತೆ ಏಳು ಸಾವಿರ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದು, ಖುದ್ದಾಗಿ ಶಾಸಕರು ನೋಂದಣಿ ಕಚೇರಿಗೆ ಆಗಮಿಸಿ ಹಕ್ಕು ಪತ್ರಗಳನ್ನು ನೋಂದಣಿ ಮಾಡಿಸಿದರು.
ಈ ವೇಳೆ ಮಾತನಾಡಿ, ಇವು ನಿಮ್ಮ ಮನೆ ನಿಮ್ಮ ಹಕ್ಕು. ನಗರದಲ್ಲಿ ಒಟ್ಟು 13 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು. ಯಾರು ಕೂಡಾ ಆತಂಕ ಪಡುವ ಅವಶ್ಯಕತೆ ಇಲ್ಲ. ಎಲ್ಲರಿಗೂ ನೋಂದಣಿಯಾಗಿರುವ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
ನಂತರ ಸಂಗಮ ವೃತ್ತದಿಂದ ಸತ್ಯನಾರಾಯಣ ಮೇಲ್ಸೇತುವೆವರೆಗೆ ಡಾಂಬರೀಕರಣ ಮಾಡಲು ಭೂಮಿಪೂಜೆ ನೆರವೇರಿಸಿದರು. 40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಆರಂಭಿಸಿ, ಬೇಗ ಮುಗಿಸಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ನಂತರ ನಗರದ 19ನೇ ವಾರ್ಡ್‌ನ ಡಿ.ಆರ್.ಮೈದಾನದಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.