ಬಳ್ಳಾರಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಚಿವ ಆನಂದ ಸಿಂಗ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಂಸದ ವೈ.ದೇವಿಂದ್ರಪ್ಪ, ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ, ಜಿಪಂ ಸಿಇಒ ನಂದಿನಿ, ಉಪಾಧ್ಯಕ್ಷೆ ದೀನಾ ಮಂಜುನಾಥ ಇದ್ದರು. 
ಜಿಲ್ಲೆ

ಕುಳಿತು ಹೋಗಲು ಸಭೆಗೆ ಬರಬೇಡಿ: ಅಧಿಕಾರಿಗಳಿಗೆ ಸಚಿವ ಆನಂದ ಸಿಂಗ್ ಎಚ್ಚರಿಕೆ

ಬಳ್ಳಾರಿ: ಕೇವಲ ಕುಳಿತು ಹೋಗಲು ಸಭೆಗೆ ಬರಬೇಡಿ. ಸಮಗ್ರ ಮಾಹಿತಿಯೊಂದಿಗೆ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಖಡಕ್ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಸಭೆಯಲ್ಲಿ ಮೂಕ ಪ್ರೇಕಕ್ಷರಾಗುತ್ತಿದ್ದೀರಿ. ಇದು ಪುನಾರವರ್ತನೆ ಆಗಬಾರದು. ಪ್ರತಿಯೊಬ್ಬರೂ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಬೇಕು. ಜನರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ನರೇಗಾದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಅಂತರ್ಜಲ ಹೆಚ್ಚಳಕ್ಕೆ ಇಂಜೆಕ್ಷನ್ ವೆಲ್, ಸೋಕ್‌ಪಿಟ್ ಅಭಿಯಾನ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೆ ಖಾತ್ರಿ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಕೂಡ ಪಾವತಿಯಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಸಭೆಗೆ ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಂಡೂರು ಶಾಸಕ ಇ.ತುಕಾರಾಮ್, ನರೇಗಾದಡಿ ಜಿಲ್ಲೆಯಲ್ಲಿರುವ ಶಾಲೆಗಳಿಗೆ ಮೂಲ ಸೌಕರ್ಯ, ಅರಣ್ಯ ಕಾಮಗಾರಿಗಳಿಗೆ ಉತ್ತೇಜನ ನೀಡಬೇಕು. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸಬೇಕು ಎಂದರು. ಇದಕ್ಕೆ ಸಚಿವ ಆನಂದ ಸಿಂಗ್ ಪ್ರತಿಕ್ರಿಯಿಸಿ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದರು. ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ರೆಡ್ಡಿ, ನಾಗೇಂದ್ರ ದೂರ
ವಿಜಯನಗರ ಜಿಲ್ಲೆ ರಚನೆಗೆ ತೀವ್ರ ವಿರೋಧಿಸಿದ್ದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಕೆಡಿಪಿ ಸಭೆಯಿಂದ ದೂರ ಉಳಿದಿದ್ದರು. ಇಬ್ಬರ ಗೈರು ಚರ್ಚೆಗೆ ಗ್ರಾಸವಾಯಿತು. ವಿಜಯನಗರ ಜಿಲ್ಲೆ ಅಧಿಕೃತ ರಚನೆಯಾಗಿ ವಾರ ಕಳೆದರೂ ನಾಯಕರ ನಡುವಿನ ಭಿನ್ನಮತ ಮಾತ್ರ ಬೂದಿ ಮುಚ್ಚಿದ ಕೆಂಡದಂತಿರುವುದು ಸಭೆಯ ಮೂಲಕ ಬೆಳಕಿಗೆ ಬಂತು.