ಜಿಲ್ಲೆ

ಶ್ರೇಯಸ್ಸು ಸಾಂಸ್ಕೃತಿಕ ಸಂಘಟನೆಗೆ ಸಲ್ಲಿದೆ

ಬಳ್ಳಾರಿ : ದೇಶದಲ್ಲಿ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿ ಹಿಡಿಯುತ್ತಲೇ, ಮಾನವರ ಪರ ಚಿಂತನೆ, ಸಾಮಾಜಿಕ ಕಾಳಜಿ, ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೇಯಸ್ಸು ಸಮುದಾಯ ಸಾಂಸ್ಕೃತಿಕ ಸಂಘಟನೆಗೆ ಸಲ್ಲುತ್ತದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೇಲ್ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನಲ್ಲಿ ನಾಟಕ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಜನ ಚಳುವಳಿಗಳ ದನಿಯಾಗಿ ಸಮುದಾಯ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಉಂಟಾದ ಅರಾಜಕತೆ, ಸ್ವಾತಂತ್ರೃದ ಭ್ರಮನಿರಸನ , ಅಸಮಾನತೆಗಳು ಸಮುದಾಯದ ಹುಟ್ಟಿಗೆ ಕಾರಣವಾದವು. ಹಲವು ಬಗೆಯ ಕ್ಷೇತ್ರದ ಸಮಾನ ಮನಸ್ಸಿನ ಚಿಂತಕರು, ಯುವಜನತೆ ಈ ಸಂಘಟನೆಯನ್ನು ಬಲಪಡಿಸಿ ಜನಮುಖಿಯಾಗಿಸಿರುವುದು ಈಗ ಇತಿಹಾಸ ಎಂದು ವಿಶ್ಲೇಷಿಸಿದರು.

ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಬಿ. ಪೀರ್ ಬಾಷ ಮಾತನಾಡಿ, ಸಮುದಾಯವು ಬಹಳ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾಜಿಕ, ರಾಜಕೀಯದ ಬಗೆಗೆ ಹೊಸ ಅರಿವನ್ನು ಉಂಟು ಮಾಡಿತು. ನಾಟಕಗಳು ಜನರ ವಾಸ್ತವ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಹೊಸ ಕಣ್ಣೋಟವನ್ನು ಕೊಟ್ಟವು ಎಂದರು.

ಕಲೆ ಆನಂದಕ್ಕಾಗಿ ಅಲ್ಲ. ಬದುಕಿಗಾಗಿ ಎನ್ನುವ ತಾತ್ವಿಕತೆಯೊಂದಿಗೆ ಸಮುದಾಯದ ಬೀದಿ ನಾಟಕಗಳು ಜನರಿಗೆ ಹೊಸ ಸಂದೇಶ, ತಿಳುವಳಿಕೆಯನ್ನು ನೀಡಿ ಎಚ್ಚರಿಸುತ್ತಿದ್ದವು ಎಂದು ವಿಶ್ಲೇಷಿಸಿದರು. ಸಮುದಾಯವು ನಾಟಕ, ಸಂಘಟನೆ, ಸಂವಾದ, ಹಾಗೂ ಜಾಥಗಳ ಮೂಲಕ ತನ್ನ ಚಟುವಟಿಕೆಗಳನ್ನು ಎಲ್ಲೆಡೆ ವಿಸ್ತರಿಸಿತು. ಸಮುದಾಯ ಎಲ್ಲ ಚಳುವಳಿಗಳ ದನಿಯಾಗಿ ಬೆಳೆಯಿತು. ಸಮುದಾಯದ ಚಟುವಟಿಕೆಗಳು ಈ ಹೊತ್ತಿಗೂ ಸಮಾಜದ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತಲೇ ಇವೆ ಎಂದರು.