ಜಿಲ್ಲೆ

ಶರಣರ ಚಿಂತನೆ ಸಾಮಾಜಿಕ ಕಳಕಳಿ ಹೊಂದಿವೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಬಸವಣ್ಣನವರನ್ನು ಒಳಗೊಂಡಂತೆ ಎಲ್ಲ ಶರಣರ ಚಿಂತನೆಗಳು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವಷ್ಟು ಕಳಕಳಿಯನ್ನು ಹೊಂದಿವೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಉತ್ಸವ ಸಮಿತಿಯಿಂದ ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ಚಿಂತನೆಗಳು ಬೆಳಕು ನಿರಂತರವಾಗಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿವೆ. ಹೀಗಾಗಿ 12ನೇ ಶತಮಾನದ ಶರಣರ ವಚನ ಸಾಹಿತ್ಯ ಎಂದೆಂದಿಗೂ ಜೀವಪರ ಧೋರಣೆಯನ್ನು ಪ್ರತಿಪಾದಿಸುತ್ತಾ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದರು.

ಭಾಲ್ಕಿ ಹಿರೇಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರವು ಬಸವಣ್ಣನವರ ಆದರ್ಶಮಯ ಚಿಂತನೆಗಳ ಮಹತ್ವ ಅರಿತು ಅದನ್ನು ನಿರಂತರವಾಗಿ ಕಾಪಾಡುವ ಉದ್ದೇಶದಿಂದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಬಸವಣ್ಣನವರಿಗೆ ಬಹುದೊಡ್ಡ ಗೌರವ ಸಲ್ಲಿಸಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರ ಸ್ವಾಮೀಜಿಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಸಮಿತಿಯಿಂದ ಬಸವ ಸಂಸ್ಕೃತಿ ಅಭಿಯಾನ ಉತ್ಸವದ ಅಂಗವಾಗಿ ಇಲ್ಲಿನ ಮೋಕಾ ರಸ್ತೆಯ ಕೆಆರ್‌ಎಸ್ ಫಂಕ್ಷನ್ ಹಾಲ್‌ನಿಂದ ನಗರಕ್ಕೆ ರಥವನ್ನು ಬೈಕ್ ರ‌್ಯಾಲಿ ಮೂಲಕ ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ರಥವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ನಗರದ ಪ್ರಮುಖ ಗಣ್ಯರು ಭಾಗವಹಿಸಿದ್ದರು.