ಬಳ್ಳಾರಿ : ಕಕ್ಷಿದಾರರು ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡು ಉತ್ತಮ ಜೀವನ ನಡೆಸಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಕಿವಿಮಾತು ಹೇಳಿದರು.
ಇಲ್ಲಿನ ಜಿಲ್ಲಾ ಸಂಕೀರ್ಣದಲ್ಲಿರುವ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ವೀಕ್ಷಿಸಿ ಮಾತನಾಡಿದರು.
ಗಂಡ-ಹೆಂಡತಿ ಪ್ರಕರಣದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸದಿಂದ ಒಳ್ಳೆಯ ಜೀವನ ಸಾಧ್ಯವಾಗುತ್ತದೆ. ಸಮಾಜದಲ್ಲಿ ಕುಟುಂಬ ಮತ್ತು ಆಸ್ತಿ ಕಲಹಗಳಿಂದ ಅಶಾಂತಿ ಉಂಟಾಗಿದ್ದು, ದ್ವೇಷ ಸಾಧಿಸದೆ ನಾನು ಎಂಬುದನ್ನು ಬಿಟ್ಟು ನಾವು ಎಂದು ಬದುಕಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದರು.
ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಸೇರಿದಂತೆ ನಾನಾ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಾರ್ಯಪ್ರವೃತ್ತರಾಗುತ್ತಾರೆ ಎಂದರು.
ಅವಳಿ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಸುಸೂತ್ರವಾಗಿ ನಡೆದು, ನಾನಾ ವ್ಯಾಜ್ಯಗಳ ಪ್ರಕರಣಗಳು ವಿಲೇವಾರಿಗೊಂಡವು.