ಬಳ್ಳಾರಿ : ಸಮಾಜದ ಶಾಂತಿಯ ಬದುಕಿಗೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಪೊಲೀಸರ ಸೇವೆ ಅತ್ಯಂತ ಶ್ಲಾಘನೀಯವಾದದ್ದು ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ. ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸುವಂತಹ ದಿನವಿದು. ಪೊಲೀಸ್ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 2024 ರ ಏ.01 ರಿಂದ 2025 ರ ಏ.01 ರವರೆಗೆ ಒಟ್ಟು 37 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಯೋ ಮತ್ತು ಸ್ವಇಚ್ಛೆ ನಿವೃತ್ತಿ ಹೊಂದಿರುತ್ತಾರೆ. ಅದರಲ್ಲಿ ಪಿಎಸ್‌ಐ 07, ಆರ್‌ಎಸ್‌ಐ-02, ಎಎಸ್‌ಐ-13, ಎಆರ್‌ಎಸ್‌ಐ-09, ಸಿಡ್‌ಸಿಪಿ-03, ಎಸ್‌ಬಿಎ 02, ಎಎಒ 01 ಪೊಲೀಸರು ನಿವೃತ್ತಿ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ 178 ಪೋಲಿಸ್‌ರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಿಪಿಐ ಕೆ.ವಿರುಪಾಕ್ಷಿ ಮಾತನಾಡಿ, ರಾಜ್ಯ ಸರ್ಕಾರದ ಸೇವೆಗಳಲ್ಲಿ ಪೊಲೀಸ್ ಸೇವೆ ಅತ್ಯಂತ ಮುಖ್ಯವಾದ ಸೇವೆಯಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯದಲ್ಲಿ ಪೊಲೀಸ್ ಸೇವೆ ಕಾರ್ಯ ವಿಶಿಷ್ಟವಾದದ್ದು. ಪ್ರತಿನಿತ್ಯವೂ ಒತ್ತಡದಿಂದ ಕೆಲಸ ನಿರ್ವಹಿಸಬೇಕಾಗಿದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕರ್ತವ್ಯದ ಜತೆಗೆ ಕುಟುಂಬಕ್ಕೂ ಸಮಯ ನೀಡಬೇಕು. ನಿವೃತ್ತರಾದ ಮೇಲೆ ಪೂರ್ಣಪ್ರಮಾಣದಲ್ಲಿ ಕುಟುಂಬದೊಂದಿಗೆ ಬೆರೆತು ಕಾಲ ಕಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ಪೊಲೀಸ್ ಧ್ವಜಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.