ಜಿಲ್ಲೆ

ಸಡಗರ ಸಂಭ್ರಮದ ಸಂಕ್ರಾಂತಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ: ಮಕರ ಸಂಕ್ರಾಂತಿ ಹಬ್ಬವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮಕರ ಸಂಕ್ರಮಣ ಈ ಪುಣ್ಯದಿನ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಇಲ್ಲಿನ ಕನಕ ದುರ್ಗಮ್ಮ, ಅಮೃತೇಶ್ವರ, ಬಾಲಾಂಜನೇಯ, ಮಲ್ಲೇಶ್ವರ ದೇವಸ್ಥಾನ, ಕುಮಾರಸ್ವಾಮಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ಅಲ್ಲೀಪುರ ಮಹಾದೇವ ತಾತನವರ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಬೆಳಗಿನಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ ಮತ್ತು ಪ್ರಸಾದ ವಿತರಣೆ ಕಾರ್ಯ ನಡೆದವು. ಹಬ್ಬದ ಹಿನ್ನೆಲೆ ದೇವಸ್ಥಾನಗಳಿಗೆ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಜತೆಗೆ ಸಂಕ್ರಾಂತಿ ಅಂಗವಾಗಿ ಹಲವರು ಕೆರೆಗಳು, ದೇವಸ್ಥಾನದ ಕೊಳ್ಳಗಳಲ್ಲಿ ಹಬ್ಬದಂದು ಎಳ್ಳು, ಹರಿಶಿಣ ಹಚ್ಚಿಕೊಂಡು ಸ್ನಾನ ಮಾಡಿದರು.

ಸೂರ್ಯನು ಮಕರ ರಾಶಿಗೆ ತೆರಳುವುದೆಂದರೆ ಉತ್ತರಾಯಣ ಪರ್ವ ಕಾಲ ಪ್ರಾರಂಭವಾಯಿತು ಎಂಬುವುದು ಜನರ ನಂಬಿಕೆಯಾಗಿದೆ. ಈ ಪುಣ್ಯಕಾಲದಲ್ಲಿ ದೇವರ ದರ್ಶನದಿಂದ ಒಳಿತಾಗುತ್ತದೆ ಎಂಬ ಭಾವನೆಯೊಂದಿಗೆ ಜನರು ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮನ ಸೆಳೆದ ಬಣ್ಣ ಬಣ್ಣದ ರಂಗೋಲಿ: ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆ ಜನರು ಸೋಮವಾರ ರಾತ್ರಿಯೇ ಮನೆಯ ಅಂಗಳವನ್ನು ಸ್ವಚ್ಚಗೊಳಿಸಿ, ಚುಕ್ಕೆ ರಂಗೋಲಿ ಬಿಡಿಸಿದ್ದರು. ಸಾಂಪ್ರಾದಯಿಕ ಬಣ್ಣ ಬಣ್ಣದ ರಂಗೋಲಿ ಚಿತ್ರಗಳು ಹೆಚ್ಚಾಗಿ ಕಂಡುಬಂದವು. ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ನಗರದ ವಿವಿಧ ಕಡೆಗಳಲ್ಲಿ ರಂಗೋಲಿ ಸ್ಪರ್ಧೆ ನಡೆದವು. ಮಹಿಳೆಯರು ಬಗೆ ಬಗೆಯ ರಂಗೋಲಿ ಚಿತ್ತಾರಗಳನ್ನು ಅರಳಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಸಹ ವಿತರಿಸಲಾಯಿತು.