ಜಿಲ್ಲೆ

ಶೈಕ್ಷಣಿಕ ಗೊಂದಲ ಬಗೆಹರಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ರಾಜ್ಯದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಬಗೆಹರಿಸಿ ಎಂಬುದಾಗಿ ಆಗ್ರಹಿಸಿ, ಇಲ್ಲಿನ ಎಸ್‌ಎಸ್‌ಎ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಈವರೆಗೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲ. ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ. ಇದು ಅವರ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿದೆ ಎಂದು ಹೇಳಿದರು.

ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ಪಾಠಗಳು ಇನ್ನೂ ಆರಂಭವಾಗಿಲ್ಲ. ಯುಜಿಸಿಯ ಹೊಸ ನಿರ್ದೇಶನಗಳು ಹಾಗೂ ಕೋರ್ಟ್‌ನಲ್ಲಿ ನಡೆಯುತ್ತಿರುವ ಮೊಕದ್ದಮೆಯಿಂದ ಅತಿಥಿ ಉಪನ್ಯಾಸಕರ ನೇಮಕಾತಿಯು ನೆನೆಗುದಿಗೆ ಬಿದ್ದಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರದ ನಿರ್ಧಾರಗಳನ್ನು ಪಾಲಿಸವುದು ಕಡ್ಡಾಯವಲ್ಲ ಎಂಬುದಾಗಿ ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ ಎಂದರು.

ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಸ್ಪಷ್ಟ ನಿಲುವು ತಾಳಬೇಕು. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರವು ಶೈಕ್ಷಣಿಕ ಚಟುವಟಿಕೆಗಳು ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತುರ್ತಾಗಿ ಕೈಗೊಂಡು ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸಬೇಕೆಂದು ಆಗ್ರಹಿಸಿದರು.