ಜಿಲ್ಲೆ

ರೆಡ್ಡಿ ಅವನತಿ ಪಾದಯಾತ್ರೆಯಿಂದಲೇ ಶುರು

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಆರಂಭವಾದ ದಿನದಿಂದಲೇ ಮಾಜಿ ಸಚಿವ ಜಿ.ಜನಾರ್ದನರಡ್ಡಿ ಅವನತಿ ಶುರುವಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಂಡೂರಿನ ಏಳುಬೆಂಚಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನನಗೆ ಬಳ್ಳಾರಿಗೆ ಕಾಲು ಇಡಿ ನೋಡೋಣ ಎಂದು ರೆಡ್ಡಿ ಸವಾಲು ಹಾಕಿದರು. ಸವಾಲು ಸ್ವೀಕರಿಸಿ ಪಾದಯಾತ್ರೆ ಮೂಲಕವೇ ಬಳ್ಳಾರಿಗೆ ಬಂದು ಸೆಡ್ಡು ಹೊಡೆದೆ. ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡುವುದಕ್ಕೆ ಸ್ಥಳ ನೀಡದೆ ಅವಮಾನ ಮಾಡಿದರು. ದೇವಸ್ಥಾನದ ಬಾಗಿಲಲ್ಲಿ ನಿಂತು ಭಾಷಣ ಮಾಡಿ ಹೋಗಿದ್ದೆ. ಒಂದು ಮನೆಗೆ ಹೋಗಿ ಕುಡಿಯೋಕೆ ನೀರು ಕೇಳಿದರೂ ನನಗೆ ನೀರು ಕೊಡೋಕೂ ಜನ ಭಯ ಬೀಳುತ್ತಿದ್ದರು. ಒಂದು ಕಾಲದಲ್ಲಿ ರೆಡ್ಡಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಮಿತಿಯೇ ಇರಲಿಲ್ಲ ಈಗ ಮತ ಕೇಳೋಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಸಿಎಂ ಆದ ವೇಳೆ ಜಿಂದಾಲ್ಗೆ ಭೇಟಿ ನೀಡಿದರೂ ಜಿಲ್ಲಾಮಟ್ಟದ ಅಧಿಕಾರಿಗಳು ಸಿಎಂ ಅವರನ್ನು ಕಾಣಲು ಬರಲಿಲ್ಲ. ಆ ಮಟ್ಟದಲ್ಲಿ ಅಧಿಕಾರಿಗಳಲ್ಲಿ ರೆಡ್ಡಿ ಭಯ, ಭೀತಿ ಸೃಷ್ಟಿ ಮಾಡಿದ್ದರು. ಅಕ್ರಮ ಗಣಿಗಾರಿಕೆಯಿಂದ ದೇಶದಲ್ಲಿ ಜಿಲ್ಲೆಗೆ ರೆಡ್ಡಿ ಕೆಟ್ಟು ಹೆಸರು ತಂದಿದ್ದಾರೆ. ಅಲ್ಲದೆ, ಸಂಡೂರಿನ ಗುಡ್ಡಗಳನ್ನು ನೆಲಸಮ ಮಾಡಿ ಬಳ್ಳಾರಿ ರಿಪಬ್ಲಿಕ್ ಮಾಡಿಕೊಂಡಿದ್ದ ರೆಡ್ಡಿ ಪಟಾಲಂಗಳಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು. ಜಲಾಶಯದ ಕ್ರಸ್ಟ್ ಗೇಟ್ ಮುರಿದ್ದರಿಂದ ರೈತರಿಗೆ ಎರಡನೆ ಬೆಳೆಗೆ ನೀರು ಸಿಗುವುದೆ ಎಂಬ ಅಂತಕದಲ್ಲಿದ್ದರು. ಯಾವ ರೈತರು ಅತಂಕಪಡುವ ಅಗತ್ಯವಿಲ್ಲ ಜಲಾಶಯದಿಂದ ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ಹರಿಸಲಾಗುವುದು ಎಂದು ಅಭಯ ನೀಡಿದರು. ನಾನು ಇರುವವರೆಗೂ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂಬುದು ತಿಳಿದಿದೆ. ಆದ್ದರಿಂದ, ಹೊಟ್ಟೆಕಿಚ್ಚಿನಿಂದ ಸಿಬಿಐ, ಇಡಿ ಹಾಗೂ ಐಟಿ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಬಳಿ ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೆ ದುಡ್ಡಿಲ್ಲ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂ. ನೀಡುವದರ ಜತೆಯಲ್ಲಿಯೇ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ನೀಡಲಾಗಿದೆ. ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಬಿಜೆಪಿಗೆ ಸಹಿಸದೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕುಟುಕಿದರು. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನಮಗೆ ಕೊಡಬೇಕಿತ್ತು. ಇದನ್ನು ರಾಜ್ಯಕ್ಕೆ ಕೊಡದೆ ನಮಗೆ ವಂಚಿಸಿದ್ದಾರೆ. ಇದೂ ಸೇರಿ ಒಟ್ಟು 17 ಸಾವಿರ ಕೋಟಿ ರೂ. ನೀಡದೆ ಕೇಂದ್ರ ಸರ್ಕಾರ ವಂಚಿಸಿದೆ. ರಾಜ್ಯದಲ್ಲಿ ನಾವಿನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿ ಇರ್ತೀವಿ. ಅಲ್ಲಿಯವರೆಗೂ ನಾವು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರೆಸಲಾಗುವುದು. ಬಿಜೆಪಿಯ ಅಪಪ್ರಚಾರ ನಂಬಬೇಡಿ. ಸುಳ್ಳುಗಳಿಗೆ ಮೋಸ ಹೋಗಬೇಡಿ. ಹೃದಯದ ಮಾತು ಕೇಳಿ ಅಭಿವೃದ್ಧಿಗೆ ನಿಮ್ಮ ಮತ ನೀಡಿ ಎಂದರು.