ಜಿಲ್ಲೆ

ರೆಡ್ಡಿಗೆ ಮತ್ತೋಮ್ಮೆ ಬಂಧನದ ಭೀತಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ; ಆಂಧ್ರ ಪ್ರದೇಶದ ಓಬಳಾಪುರಂನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿಗೆ ದೆಹಲಿಯ ಸಿಬಿಐ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ಪ್ರಕಟಿಸಿ ಏಳು ವರ್ಷ ಶಿಕ್ಷೆ ವಿಧಿಸಿದೆ. ಇದೀಗ ಜಾಮೀನಿನ ಮೇಲೆ ಹೊರಗಿದ್ದ ರೆಡ್ಡಿಗೆ ಮತ್ತೋಮ್ಮೆ ಸಂಕಷ್ಟ ಎದುರಾಗಿದೆ.

ಈ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಅವರಿಗೆ ಜಾಮೀನು ನೀಡುವ ವೇಳೆ ಸುಪ್ರೀಂಕೋರ್ಟ್ ಬಳ್ಳಾರಿ, ಕಡಪ ಹಾಗೂ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಆ ಬಳಿಕ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ ತವರು ಜಿಲ್ಲೆಯಿಂದ ಹೊರಗುಳಿದಿದ್ದರು. ಪುತ್ರಿ ಮದುವೆ ಸೇರಿ ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಬಂದಿದ್ದರು. ಬಳಿಕ ತವರು ಜಿಲ್ಲೆಗೆ ತೆರಳಲು ವಿಧಿಸಿದ್ದ ನಿರ್ಬಂಧವನ್ನು ಸುಪ್ರಿಂ ಕೋರ್ಟ್ ಹದಿಮೂರು ವರ್ಷಗಳ ಬಳಿಕ ತೆರವುಗೊಳಿಸಿತ್ತು. ತೀರ್ಪು ಸ್ವಾಗತಿಸಿ ಕಳೆದ 2024 ಅಕ್ಟೋಬರ್ 3 (ದಸರಾ ಹಬ್ಬದಂದು) ಗಣಿನಾಡು ಬಳ್ಳಾರಿ ಜಿಲ್ಲೆಗೆ ಬಾಣ, ಬಿರುಸು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಹೆಜ್ಜೆ ನಾದದೊಂದಿಗೆ ನೂರಾರು ಸಂಖ್ಯೆಯ ಅಭಿಮಾನಿಗಳು ಜೆಸಿಬಿಯಿಂದ ಗಜಮಾಲೆ ಹಾಕಿ, ಹಸಿರು ಸೀರೆಯುಟ್ಟು ಪೂರ್ಣಕುಂಭ ಹೊತ್ತಿದ್ದ ಸುಮಂಗಲೆಯರು, ರೆಡ್ಡಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.

ಮರು ರಾಜಕೀಯ : ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2023ರಲ್ಲಿ ರಾಜಕೀಯ ಜೀವನ ಆರಂಭಿಸಿ 2024ರ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ವನ್ನು ಸ್ಥಾಪಿಸಿದರು. ಬಳ್ಳಾರಿ ನಗರದಿಂದ ಪತ್ನಿ ಅರುಣಾ ಲಕ್ಷ್ಮೀ, ರೆಡ್ಡಿ ಸಹೋದರ ಜಿ.ಸೋಮಶೇಖರರೆಡ್ಡಿ ವಿರುದ್ಧ ಸ್ಪರ್ಧಿಸಿದ್ದರು. ರಾಜ್ಯದ ವಿವಿಧಡೆ ಪಕ್ಷದಿಂದ ಸ್ಪರ್ಧಿಸಿದ ಯಾವ ಅಭ್ಯರ್ಥಿ ಗೆಲ್ಲಲಿಲ್ಲ. ಕೇವಲ ಗಂಗಾವತಿಯಲ್ಲಿ ಮಾತ್ರ ಜಿ. ಜನಾರ್ದನರೆಡ್ಡಿ ಗೆದ್ದು ಶಾಸಕರಾಗಿ ಮರು ರಾಜಕೀಯ ಜೀವನ ಆರಂಭಿಸಿದರು. ಬಳಿಕ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಸೇರ್ಪಡೆಗೊಂಡರು. ಬಳಿಕ ಜಿಲ್ಲೆಯ ಸಂಡೂರು ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ರೆಡ್ಡಿ ತನ್ನ ಬೆಂಬಲಿತ ಬಂಗಾರು ಹನುಮಂತುಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದರು. ಆದರೆ, ಕಡಿಮೆ ಅಂತರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೋತಿತು. ಉಪಚುನಾವಣೆ ಸೋಲಿಗೆ ನೇರಹೊಣೆ ಮಾಜಿ ಸಚಿವ ಬಿ.ಶ್ರೀರಾಮುಲು ಎಂಬುದಾಗಿ ರಾಜ್ಯ ನಾಯಕರಿಗೆ ದೂರು ಸಲ್ಲಿಸಿದರು. ಇದರಿಂದ ಬಹಿರಂಗವಾಗಿ ಅಸಮಾಧಾನಗೊಂಡ ರಾಮುಲು, ರೆಡ್ಡಿ ವಿರುದ್ಧ ನೇರವಾಗಿ ವಾಗ್ದಳಿ ನಡೆಸಿದ್ದರು. ಹಲವು ವರ್ಷಗಳ ರೆಡ್ಡಿ ಹಾಗೂ ರಾಮುಲು ಗೆಳೆತನದ ನಡುವೆ ಇರಿಮುರಿಸು ಉಂಟಾಯಿತು.

ಯಾವಾಗ ಬಂಧನ : ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಆರೋಪದಡಿ ರೆಡ್ಡಿ ಅವರನ್ನು 2011ರ ಸೆ.5ರಂದು ಬಂಧಿಸಿ, ಹೈದ್ರಾಬಾದ್‌ನ ಚಂಚಲಗೂಡ ಜೈಲಿಗೆ ಕಳುಹಿಸಲಾಗಿತ್ತು. ಕರ್ನಾಟಕದ ಎಎಂಸಿ ಕಂಪನಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಬೆಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿ, ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿರಿಸಿದ್ದರು. ಒಟ್ಟು ನಾಲ್ಕು ವರ್ಷ ಒಂಬತ್ತು ತಿಂಗಳು ಕಾಲ ಜೈಲುವಾಸ ಅನುಭವಿಸಿದ್ದ ಅವರಿಗೆ 2016ರಲ್ಲಿ ಷರತ್ತುಗಳೊಂದಿಗೆ ಜಾಮೀನು ದೊರೆತು ಬಿಡುಗಡೆಯಾಗಿದ್ದರು. ಮತ್ತೆ ಒಂಬತ್ತು ವರ್ಷಗಳ ಬಳಿಕ ಆಂಧ್ರಪ್ರದೇಶದ ಓಬಳಾಪುರಂನಲ್ಲಿ ನಡೆದ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಈ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ 3000ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದ್ದು, 219 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಮಂಗಳವಾರ ತೀರ್ಪು ಪ್ರಕಟವಾಗುತ್ತೆ ಎಂಬ ವಿಷಯ ತಿಳಿದಿದ್ದ ರೆಡ್ಡಿ ಕುಟುಂಬ ಸಮೇತ ಬಳ್ಳಾರಿಯಿಂದ ಬೆಳಗಿನ ಜಾವವೇ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ. ಸಿಬಿಐ ತೀರ್ಪು ಪ್ರಶ್ನಿಸಿ ರೆಡ್ಡಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿದವು. ನಗರದ ರೆಡ್ಡಿ ನಿವಾಸದ ಮುಂಭಾಗದಲ್ಲಿ ಕಾರ್ಯಕರ್ತರ ಇಲ್ಲದೆ ಮಂಕಾಗಿದೆ.

===