ಜಿಲ್ಲೆ

ಎಸಿಬಿ, ಸಿಬಿಐಯಿಂದ ಮಾಹಿತಿ ನಂತರ ವಸೂಲಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯ ಗಡಿಭಾಗದ ಓಬಳಾಪುರಂ ( ಒಎಂಸಿ ) ಕಂಪನಿಯು ಅಕ್ರಮ ಗಣಿಗಾರಿಕೆಯಿಂದ 884 ಕೋಟಿ ರೂ. ವಸೂಲಾತಿಗೆ ಮುನ್ನ ಸಿಬಿಐ ಮತ್ತು ಹೈದರಾಬಾದ್ ಭ್ರಷ್ಟಾಚಾರ ನಿಗ್ರಹದಳ ( ಎಸಿಬಿ) ದಿಂದ ಮಾಹಿತಿ ಸಂಗ್ರಹಿಸಿದ ನಂತರ ವಸೂಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈಗಾಗಲೇ ಈ ಪ್ರಕರಣವನ್ನು ಸಿಬಿಐ ಮತ್ತು ಹೈದರಾಬಾದ್‌ ನ ಎಸಿಬಿಯು ತನಿಖೆ ನಡೆಸಿದೆ. ಆರ್ಥಿಕ ನಷ್ಟವನ್ನೂ ವಸೂಲಿ ಮಾಡಬೇಕಾದರೆ ಈ ಎರಡು ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸುವುದು ಸೂಕ್ತವಾಗಿದೆ ಎಂಬುದಾಗಿ ನಿರ್ದೇಶಕರು ಪತ್ರದಲ್ಲಿ ಗಮನ ಸೆಳೆದಿರುವುದು ತಿಳಿದು ಬಂದಿದೆ.

ಏನಿದು ಪ್ರಕರಣ : ಸಂಡೂರು ಕ್ಲಸ್ಟರ್ ಗುತ್ತಿಗೆಗಳಿಂದ ಒಎಂಸಿ ಸಮೂಹ ಕಂಪನಿಗಳು 884 ಕೋಟಿ ರೂ. ಮೌಲ್ಯದ 29 ಲಕ್ಷ ಟನ್ ಅದಿರು ಮಾರಾಟ ಪ್ರಕರಣ ಸಂಬಂಧಿಸಿ ವಸೂಲಿಗೆ ಆಗ್ರಹಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದರು. ಇದರ ಜತೆಯಲ್ಲಿ ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ ) 2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ, ಅಕ್ರಮ ಗಣಿಗಾರಿಕೆ ಕುರಿತು ಪ್ರಕರಣವೊಂದರಲ್ಲಿ ಸಿಬಿಐ ‌ನೀಡಿದ ತೀರ್ಪಿನ ಪ್ರತಿ ಹಾಗೂ ಲೋಕಾಯುಕ್ತ ವರದಿ ಲಗತ್ತಿಸಿ ಪತ್ರ ಬರೆದಿದ್ದರು.