ಜಿಲ್ಲೆ

ಶೀಘ್ರದಲ್ಲೇ ರೈಲ್ವೆ ಮೇಲ ಸೇತುವೆ ಆರಂಭ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿನ ಎರಡನೇ ಗೇಟ್ ಬಳಿಯ ರೈಲ್ವೆ ಮೇಲ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆತಿದೆ, ಕೆಲ ದಿನಗಳಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ನೂತನ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿದರು. ನಗರ ಹಾಗೂ ಜಿಲ್ಲೆಯ ವಿವಿಧಡೆ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ತ್ವರಿತಗತಿಯಲ್ಲಿ ‌ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಜಿಂದಾಲ್ ಸಂಸ್ಥೆ ನಿರ್ಮಾಣ ಮಾಡಲಿರುವ ಹದ್ದಿನಗುಂಡು ಹಲಕುಂದಿ ಮಧ್ಯದ ರೈಲ್ವೇ ಕಾಮಗಾರಿ ವೈಜ್ಞಾನಿಕವಾಗಿ ನಡೆಯಲಿ, ಅವೈಜ್ಞಾನಿಕವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿಲಾಗುವುದು ಎಂದರು. ರಾತ್ರಿ ವೇಳೆ ಲಾರಿಗಳು ಅತಿವೇಗದಲ್ಲಿ ಸಂಚಾರಿಸುತ್ತಿವೆ. ಅಲ್ಲದೆ ಬಹುತೇಕ ಚಾಲಕರು ಮದ್ಯ ಸೇವಿಸಿ ಚಲಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲಂದರಲ್ಲಿ ದೊರೆಯುವ ಮದ್ಯ ಕಾರಣವಾಗಿದೆ. ಆದ್ದರಿಂದ, ಅಕ್ರಮ ಮದ್ಯ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಯುಗಾದಿ ಹಬ್ಬದ ದಿನದಂದು ನಗರದಲ್ಲಿ ಜನಸಂಪರ್ಕ ಕಚೇರಿಯ ಕಾಮಗಾರಿಯ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.