ಜಿಲ್ಲೆ

ಭಯಪಡಿಸದೆ ಚಿಕಿತ್ಸೆ ಒದಗಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಹಾವು ಕಡಿದ ವ್ಯಕ್ತಿಯನ್ನು ಭಯಪಡಿಸದೆ, ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ ಹೇಳಿದರು.

ನಗರದ ಮುಂಡ್ರಿಗಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗುಗ್ಗರಹಟ್ಟಿ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಹಾವು ಕಡಿತ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವು ಕಚ್ಚಿದಾಗ ಗಾಬರಿಯಾಗುವುದು ಸಾಮಾನ್ಯವಾಗಿದ್ದು, ಇದರಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಿಷಕಾರಿ ಹಾವು ಕಡಿತದ ಸಂದರ್ಭದಲ್ಲಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆದ್ಯತೆ ನೀಡಬೇಕು ಎಂದರು.

ವೈದ್ಯಾಧಿಕಾರಿ ಡಾ.ಕಾಶಿಪ್ರಸಾದ್ ಮಾತನಾಡಿ, ಹಾವು ಕಚ್ಚಿದಾಗ ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯನ್ನು ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಔಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬೇಡಿ ಎಂದು ಸಲಹೆ ನೀಡಿದರು.

ಇದೇ ವೇಳೆಯಲ್ಲಿ ನಾಯಿ ಕಡಿತ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು, ಬೇಸಿಗೆ ಹಿನ್ನೆಲೆಯಲ್ಲಿ ಶುದ್ದ ನೀರಿನ ಮಹತ್ವ ಕುರಿತು ಅರಿವು ಮೂಡಿಸಲಾಯಿತು.