ಜಿಲ್ಲೆ

ಸಮರ್ಪಕವಾಗಿ ರಸಗೊಬ್ಬರ ಒದಗಿಸಿ

ಬಳ್ಳಾರಿ : ಜಿಲ್ಲೆಯಲ್ಲಿ ರೈತರಿಗೆ ರಸಗೊಬ್ಬರ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವರ ಬಗ್ಗೆ ಡಿಸಿ, ಎಸ್ಪಿ ಗಮನಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ ಕೃಷಿ ಅಧಿಕಾರಿಗಳಿಗೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೃಷಿ, ತೋಟಗಾರಿಕೆ ಯೋಜನೆಗಳನ್ನು ಸಕಾಲಕ್ಕೆ ರೈತರಿಗೆ ತಲುಪಿಸಬೇಕು. ಜಿಲ್ಲೆಯಲ್ಲಿ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ. ರೈತರಿಗೆ ರಸಗೊಬ್ಬರಗಳ ಕೊರತೆ ನೀಗಿಸಲು ಮುಂಜಾಗ್ರತೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಆಸ್ಪತ್ರೆ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ಅಧಿಕಾರಿ ವರ್ಗ ನಿಗಾ ವಹಿಸಬೇಕು. ಎಲ್ಲ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಸಮರ್ಪಕ ಅನುಷ್ಠಾನದೆಡೆಗೆ ಗಮನ ಹರಿಸಬೇಕು. ನಿಗದಿಪಡಿಸಿದ ಗುರಿ ಸಾಧನೆಯಡೆಗೆ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು. ಅಂಗನವಾಡಿ ಕೇಂದ್ರ ಮತ್ತು ಶಾಲೆಗಳ ಮೇಲೆ ಯಾವುದೇ ರೀತಿಯ ವಿದ್ಯುತ್‌ಲೈನ್‌ಗಳು ಹಾದುಹೋಗುವಂತಿಲ್ಲ, ಕೂಡಲೇ ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಜೆಸ್ಕಾಂ ಅಧಿಕಾರಿಗಳು ಸರ್ವೆ ನಡೆಸಿ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ನಿರ್ದೇಶಿಸಿದರು.

ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳು ತಲುಪಬೇಕು. ಜತೆಗೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಡೆಗೆ ಸಂಬಂಧಿತ ಇಲಾಖೆಯ ಮುಖ್ಯಸ್ಥರು ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕು ಎಂದರು.

ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಬಿಮ್ಸ್‌ನಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗುತ್ತಿಲ್ಲ, ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯರು ಲಭಿಸುತ್ತಿಲ್ಲ, ರಕ್ತ, ಔಷಧಿ ಹಾಗೂ ಸಾಮಾನ್ಯ ವೀಲ್ ಚೇರ್ ವ್ಯವಸ್ಥೆಗೂ ಸಹ ಹಣ ಪಡೆಯುತ್ತಾರೆ ಎಂಬುದಾಗಿ ಕಚೇರಿಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಅಲ್ಲಿನ ಗೃಹರಕ್ಷಕದಳ ಸಿಬ್ಬಂದಿಯಿಂದ ಹೊರಗುತ್ತಿಗೆ ನೌಕರರು, ವೈದ್ಯರು ಸಹ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಬಿಎಂಸಿಆರ್‌ಸಿ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಮೇಲೆ ಸಭೆಯಲ್ಲಿ ದೂರಿದರು.

ಜಂಟಿ ಕೃಷಿ ನಿರ್ದೇಶಕ ಎಂ.ಸೋಮಸುಂದರ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜುಲೈ ಮಾಹೆಯವರೆಗೆ ಒಟ್ಟು 27,025 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದೆ. ಈವರೆಗೆ ಪ್ರಾರಂಭಿಕ 34,163 ಮೆಟ್ರಿಕ್ ದಾಸ್ತಾನು ಪೈಕಿ 25,887 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 8,286 ಮೆಟ್ರಿಕ್ ಟನ್‌ನಷ್ಟು ದಾಸ್ತಾನಿದೆ. ಅಲ್ಲದೆ, ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಪರಿವೀಕ್ಷಕರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.