ಜಿಲ್ಲೆ

ವಿದ್ಯಾರ್ಥಿ ವೇತನ ಬಿಡುಗಡೆಗಾಗಿ ಪ್ರತಿಭಟನೆ

ಬಳ್ಳಾರಿ ; ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಎಐಡಿಎಸ್‌ಒ ಸಂಘಟನೆಯು ಇಲ್ಲಿನ ಎಸ್ಪಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿತು.

ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಈರಣ್ಣ ಮಾತನಾಡಿ, ಪ್ರಸ್ತುತ ದಿನದಲ್ಲಿ ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ. ಇನ್ನೊಂದೆಡೆ ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳಿಸುವುದರಿಂದ ಅಧಿಕ ಪ್ರಮಾಣದ ರೈತರು ಹಾಗೂ ಮಧ್ಯಮ ವರ್ಗದವರು ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ. ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈವರೆಗೂ ಯಾವುದೇ ಕ್ರಮ ಸರ್ಕಾರ ಕೈಗೊಂಡಿಲ್ಲ. ಕ್ರಮೇಣ ರಾಜ್ಯದಲ್ಲಿ ವಿದ್ಯಾರ್ಥಿ ವೇತನವನ್ನೇ ಕಡಿತಗೊಳಿಸುವ ಪರಿಸ್ಥಿತಿ ಉಂಟಾಗುವ ಆತಂಕ ರಾಜ್ಯದ ವಿದ್ಯಾರ್ಥಿಗಳಿಗಿದೆ. ವಿದ್ಯಾರ್ಥಿ ವೇತನ ಅನ್ನುವುದು ವಿದ್ಯಾರ್ಥಿಗಳ ಹಕ್ಕು, ಇದನ್ನು ಕಸಿದುಕೊಳ್ಳುವ ಸರ್ಕಾರದ ನಡೆಯನ್ನು ಒಪ್ಪುವುದಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.