ಬಳ್ಳಾರಿ : ಸಮಾಜದಲ್ಲಿ ಕಾನೂನಾತ್ಮಕವಾಗಿ ಜೀವಿಸಲು ಸಂವಿಧಾನಾತ್ಮಕವಾಗಿರುವ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೀಡ್ಸ್ ಸಂಸ್ಥೆ, ಶಾಲಾ (ಪದವಿ ಪೂರ್ವ) ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಸಹಯೋಗದೊಂದಿಗೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಆರೋಗ್ಯ, ವಸತಿ, ಉದ್ಯೋಗ ಹೊಂದುವ ಹಕ್ಕು, ಶಿಕ್ಷಣ ಹಕ್ಕು ಸೇರಿದಂತೆ ಹಲವಾರು ಹಕ್ಕುಗಳು ಹೊಂದುವ ಅವಕಾಶವಿದೆ. ಮಾನವ ಹಕ್ಕುಗಳಿಗೆ ಚ್ಯುತಿಯಾಗದಂತೆ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ಘನತೆ, ಗೌರವದಿಂದ ಬದುಕುವ ಹಕ್ಕು ಇದ್ದೂ, ಮಾನವ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜದ ಕಟ್ಟಕಡೆಯ ಪ್ರಜೆಯೂ ಸಹ ಸಹಬಾಳ್ವೆ ಜೀವನ ನಡೆಸಲು ಮಾನವ ಹಕ್ಕುಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಇದೇ ವೇಳೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಮಹಿಳೆ ನಾರಾಯಣಮ್ಮ ಅವರಿಗೆ ರೀಡ್ಸ್ ಸಂಸ್ಥೆಯಿಂದ ನೀಡಲಾದ ಆಟೋ ರಿಕ್ಷಾದ ಕೀ ಹಸ್ತಾಂತರಿಸಿದರು.
ಜಾಗೃತಿ ಜಾಥಾ : ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವು ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭಗೊಅಡು ಕನಕ ದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ಎಸ್ಪಿ ಕಚೇರಿ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು.