ಜಿಲ್ಲೆ

ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ

ಬಳ್ಳಾರಿ : ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣಾ ಮತ್ತು ಸಾಕ್ಷಾರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಆರ್‌ಟಿಇ ಕಾಯ್ದೆಯಡಿ ಶಾಲೆಯಲ್ಲಿದೆ ಶಿಕ್ಷಣ ಜತೆಗೆ ರಕ್ಷಣೆ ಮತ್ತು ಮಕ್ಕಳೊಂದಿಗೆ ಮುಕ್ತ ಸಂವಾದ ಮತ್ತು ಆಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಉಚಿತ ಊಟ, ಸಮವಸ್ತ್ರ, ಪೌಷ್ಠಿಕ ಆಹಾರಗಳೊಂದಿಗೆ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ. ಪೋಷಕರಲ್ಲಿ ಸರ್ಕಾರಿ ಶಾಲೆಗಳ ಮೇಲಿನ ಪೂರ್ವಾಗ್ರಹವನ್ನು ಹೋಗಲಾಡಿಸಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಕಳೆದ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿಯೇ ಸುಮಾರು 60 ಸಾವಿರಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವರದಿ ಮಾಡಿದೆ. ರಾಜ್ಯದಲ್ಲಿ 2012 ರಿಂದ 2024 ರವರೆಗೆ 3,800 ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಮಕ್ಕಳು ಸಂವಿಧಾನಾತ್ಮಕವಾಗಿರುವ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಜೀವನಾಧಾರಿತ ಮೌಲ್ಯ ಶಿಕ್ಷಣ ಹೊಂದುವ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು, ಆಯೋಗದ ಮಾಜಿ ಸದಸ್ಯ ಎಚ್.ಸಿ.ರಾಘವೇಂದ್ರ ಭಟ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿನಿಯರು ಗ್ರಾಮಗಳಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಬಾಲ್ಯ ವಿವಾಹ ಹೆಚ್ಚಳ ಹಾಗೂ ಬಸ್ ಸೌಲಭ್ಯದ ಬಗ್ಗೆ ಸಂವಾದದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಿ ಕೆಲ ಸಮಸ್ಯೆಗಳನ್ನು ಕೆಲವೇ ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.