ಜಿಲ್ಲೆ

ಜನಸಂಖ್ಯೆ ನಿಯಂತ್ರಣಕ್ಕೆ ಅದ್ಯತೆವಹಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ದಂಪತಿಗಳು ಚಿಕ್ಕ ಸಂಸಾರಕ್ಕೆ ಆದ್ಯತೆ ನೀಡಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.

ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಹಯೋಗದೊಂದಿಗೆ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಜನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಜನಸಂಖ್ಯೆ ನಿಯಂತ್ರಣಕ್ಕಾಗಿ ಪ್ರಸ್ತುತ ಇಲಾಖೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಶಾಶ್ವತ ಶಸ್ತಚಿಕಿತ್ಸಾ ವಿಧಾನಗಳು ಲಭ್ಯವಿವೆ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಜಿಲ್ಲಾ ಪ್ರಭಾರ ಕುಟುಂಬ ಕಲ್ಯಾಣಾಧಿಕಾರಿ ಡಾ.ಹನುಮಂತಪ್ಪ ಮಾತನಾಡಿ, ದಂಪತಿಗಳು ಮದುವೆ ನಂತರ ಕನಿಷ್ಟ ಮೂರು ವರ್ಷಗಳವರೆಗೆ ಮಕ್ಕಳಾಗುವುದನ್ನು ತಡೆಗಟ್ಟಬೇಕು. ಎರಡು ಮಕ್ಕಳಿಗೆ ಸಂತಾನ ನಿಯಂತ್ರಿಸಿ ಹಾಗೂ ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷ ಅಂತರ ಕಾಯ್ದಕೊಳ್ಳಬೇಕು ಎಂದರು.

ಜಾಥಾವು ಜಿಲ್ಲಾಸ್ಪತ್ರೆಯ ಆವರಣದಿಂದ ಆರಂಭವಾಗಿ ಸಂಗಮ್ ತಲುಪಿ ಡಿಎಚ್‌ಒ ಕಚೇರಿಯ ಆವರಣಕ್ಕೆ ತಲುಪಿ ಮುಕ್ತಯಗೊಂಡಿತು. ಜಾಥಾದಲ್ಲಿ ಜಾಗೃತಿ ಫಲಕ ಮತ್ತು ಭಿತ್ತಿಚಿತ್ರಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ಕುಟುಂಬ ಕಲ್ಯಾಣ ವಿಧಾನಗಳ ಕುರಿತ ಭಿತ್ತಿಪತ್ರ ಅನಾವರಣಗೊಳಿಸಲಾಯಿತು. ಬಳಿಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.