ಜಿಲ್ಲೆ

ರಾಸಯನಿಕ ಮುಕ್ತ ಉತ್ಪನ್ನಕ್ಕೆ ಅದ್ಯತೆ ವಹಿಸಿ

ಬಳ್ಳಾರಿ : ಬೆಳೆಗಳಿಗೆ ರಸಗೊಬ್ಬರದ ಅತಿಯಾದ ಬಳಕೆಯಿಂದ ಉತ್ತಮ ಬೆಲೆ ದೊರೆಯದು. ಹೀಗಾಗಿ, ಕಲ್ಯಾಣ ಸಂಪದ ಹೆಸರಿನಲ್ಲಿ ಬೆಳೆಯುವ ರೈತರು ರಾಸಯನಿಕ ಮುಕ್ತ ಉತ್ಪನ್ನಗಳಿಗೆ ಹೆಚ್ಚು ಅದ್ಯತೆ ನೀಡಬೇಕು ಎಂದು ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು.

ಸಿರಗುಪ್ಪ ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಸಂಸದೀಯ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿ ರೈತರಿಗೆ ಸ್ಥಳೀಯ ಕೃಷಿ ತರಬೇತಿ ಕೇಂದ್ರ ಮತ್ತು ಕೃಷಿ ಸಂಸ್ಕರಣೆ ಘಟಕ ಉದ್ಘಾಟಿಸಿ ಮಾತನಾಡಿದರು. ರಾಸಯನಿಕ ಗೊಬ್ಬರ ತ್ಯಜಿಸಿ ವೈಜ್ಞಾನಿಕವಾಗಿ ಸಾವಯವ ಬೆಳೆ ಬೆಳೆಯಲು ರೈತರು ಮುಂದಾಗಬೇಕು. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಗೆ ವಿಜ್ಞಾನಿಗಳನ್ನು ಕರೆತಂದು ರೈತರಿಗೆ ಜಾಗೃತಿ ಮೂಡಿಸಲು ಐಟಿಸಿ ಕಂಪನಿಗೆ ತಿಳಿಸಲಾಗಿದೆ ಎಂದರು.

ಪ್ರಧಾನಿ‌ ನರೇಂದ್ರ ಮೋದಿ ಅವರು ಸಹ ರೈತರ ಅಭಿವೃದ್ಧಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ದೇಶದ ನೂರು ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಧನ, ಧಾನ್ಯ ಯೋಜನೆ ಜಾರಿಗೊಳಿಸಿದ್ದಾರೆ. ಈ ಮೂಲಕ ನೀರು, ಮಾರುಕಟ್ಟೆ, ರಸಗೊಬ್ಬರ ಸೇರಿ ನಾನಾ ಸೌಲಭ್ಯಗಳ ದೊರಕಲಿದೆ.

ಕಕ ಏಳು ಜಿಲ್ಲೆಗಳಲ್ಲಿ ಏಳು ಘಟಕ ಸ್ಥಾಪನೆ ಉದ್ದೇಶಿಸಿದ್ದು, ಇದರಲ್ಲಿ ಈಗಾಗಲೇ ಮೂರು ಘಟಕ ಸ್ಥಾಪಿಸಲಾಗಿದೆ. ಇನ್ನೂಳಿದ ನಾಲ್ಕು ಜಿಲ್ಲೆಗಳಲ್ಲಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಕಕ ಭಾಗದ ಆಯಾ ಜಿಲ್ಲೆಯ ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಕೇಂದ್ರ, ರಾಜ್ಯ ಸರ್ಕಾರದೊಂದಿಗೆ ಪಿಪಿಪಿ ಸಹಭಾಗಿತ್ವದಲ್ಲಿ ಘಟಕ ಸ್ಥಾಪಿಸಿ ರೈತರ ನೆರವಿಗೆ ಮುಂದಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಸರ್ಕಾರದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ. ಆದರೆ, ದೇಶದಲ್ಲಿಯೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಎಫ್ ಪಿಒ ಅನ್ನು ಸರ್ಕಾರ, ಖಾಸಗಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಘಟಕ ಸ್ಥಾಪಿಸಿದ್ದು ದೇಶಕ್ಕೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಿರುವ ಸಿದ್ಧಗಂಗಾ ಶ್ರೀ ಎಫ್ ಪಿಒ ನಲ್ಲಿ ರೈತರೇ ಸ್ವಯಂಪ್ರೇರಿತವಾಗಿ 12 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿರುವುದು ಗಮನರ್ಹವಾಗಿದೆ. ಹೀಗಾಗಿ, ಈ ಘಟಕ ಇತರೆ ಜಿಲ್ಲೆಗಳ ಘಟಕಗಳ ಹೊರತಾಗಿ ವಿಶೇಷವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಈ ಘಟಕದಲ್ಲಿ 1150 ರೈತರು ಸದಸ್ಯರು, 373 ಮಹಿಳಾ ಸದಸ್ಯರಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತಾಲಯದ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಪ್ರಧಾನವಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಕ ಭಾಗದ ಏಳು ಜಿಲ್ಲೆಗಳಲ್ಲಿ ನಾನಾ ಬೆಳೆಯ ಸಂಸ್ಕ್ರರಣ ಘಟಕ ಆರಂಭಿಸಿರುವುದು ಸಂಸತ ತಂದಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರದೊಂದಿಗೆ ನಬಾರ್ಡ್ ಕೈಜೋಡಿಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಅದ್ಯತೆ ನೀಡಲಾಗುತ್ತಿದೆ. ಈ ಘಟಕಗಳ ಸ್ಥಾಪನೆಯಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ, ಕಿರು ಉದ್ಯಮ ಸೃಷ್ಠಿಯೊಂದಿಗೆ ಆಯಾ ಭಾಗದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಜೀವನೋಪಾಯಕ್ಕೆ ಬಲ ಸಿಗುವುದರೊಂದಿಗೆ, ರೈತರ ಶ್ರಮಕ್ಕೂ ಫಲ ಸಿಕ್ಕಂತಾಗಲಿದೆ ಎಂದರು.

ಐಟಿಸಿ ಅಧ್ಯಕ್ಷ ಸಂಜೀವ್ ಪುರಿ, ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿ ನಾಗರಾಜ್, ಶಾಸಕ ಬಿ.ಎಂ.ನಾಗರಾಜ, ವಿಧಾನ ಪರಿಷತ್ತಿನ ಮುಖ್ಯಸಚೇತಕ ಎನ್.ರವಿ ಕುಮಾರ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ವಿತ್ತೆ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ತೆಲುಗಿನಲ್ಲಿ ಭಾಷಣ : ನಿರ್ಮಲಾ ಸೀತಾರಾಮನ್ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಆದರೆ, ಸ್ಥಳೀಯ ಜನರು ತೆಲುಗು ಭಾಷೆ ಅರ್ಥವಾಗುತ್ತಿದೆ ಎಂಬುದಾಗಿ ತಿಳಿದು ಭಾಷಣ ಎಲ್ಲವೂ ತೆಲುಗು ಭಾಷೆಯಲ್ಲಿ ಮಾತನಾಡಿದರು. ಕೆಲವೊಂದು ಮಾತುಗಳಿಗೆ ರೈತರು ಚಪ್ಪಾಳೆ ಹಾಕುತ್ತಿರುವುದು ಗಮನಿಸಿ ನನ್ನ ಭಾಷಣ ಎಲ್ಲರಿಗೂ ಅರ್ಥವಾಗುತ್ತಿದೆ ಎಂಬುದು ತಿಳಿಯಿತು ಎಂದರು.

ಬಾಕ್ಸ್ : ಶಾಸಕ ಬಿ‌.ಎಂ. ನಾಗರಾಜ ಭಾಷಣದಲ್ಲಿ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಅವರ ಅಪ್ತ ಕಾರ್ಯದರ್ಶಿ ಅನಿರುದ್ದ ಶ್ರವಣ ಅವರು ಜಿಲ್ಲೆಯಲ್ಲಿ ಎಸಿ ಯಾಗಿ ಕಾರ್ಯ ನಿರ್ವಹಿಸಿದ ವೇಳೆ ತಾಲೂಕಿನ ಕೆರೆ ಅಭಿವೃದ್ಧಿ ಪಡಿಸಿದ್ದರು ಎಂಬುದಾಗಿ ಹೇಳಿದ ಅಧಿಕಾರಿ ಮುಜುಗರಕ್ಕೆ ಈಡಬೇಕಾಯಿತು. ಸಚಿವೆಯರ ಮುಂದೆ ಅಧಿಕಾರಿ ಹೊಗಳಿದ್ದು ನಗೆಪಾಟೀಲಿಗೆ ಈಡಾಯಿತು.