ಜಿಲ್ಲೆ

ಪೋಸ್ಟಲ್ ಬ್ಯಾಲಟ್ ಮತದಾನಕ್ಕೆ ಅವಕಾಶ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಉಪಚುನಾವಣೆಯಲ್ಲಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತ ಆ ಕ್ಷೇತ್ರದ ಅಧಿಕಾರಿ, ಸಿಬ್ಬಂದಿ ಮತದಾನದಿಂದ ವಂಚಿತರಾಗದಂತೆ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಕಲ್ಪಿಸಲಾಗಿದೆ ಎಂದು ಎಡಿಸಿ ಮಹಮ್ಮದ್ ಝುಬೇರ್ ಹೇಳಿದರು.

ಇಲ್ಲಿನ ಎಡಿಸಿ ಕಚೇರಿಯಲ್ಲಿ ಪೋಸ್ಟಲ್ ಬ್ಯಾಲಟ್‌ನಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿಸಿದಂತೆ ಶನಿವಾರ ನಡೆ ಸಭೆಯಲ್ಲಿ ಮಾತನಾಡಿದರು. ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ಜೆಸ್ಕಾಂ, ಬಿಎಸ್‌ಎನ್‌ಎಲ್, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಟ್ರಾಫಿಕ್ ಪೊಲೀಸ್, ಆಂಬುಲೆನ್ಸ್ ಸೇವೆಯಲ್ಲಿರುವರು, ಕಾರಾಗೃಹ ಸೇರಿದಂತೆ 16 ಇತರೆ ಸೇವೆಗಳಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದ ಕಾರಣದಿಂದಾಗಿ ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದ ಸಂದರ್ಭ ಬರಬಹುದಾದ ನೌಕರರಿಗೆ ಮತದಾನ ದಿನದ ಬದಲಿಗೆ ಮತದಾನ ದಿನಕ್ಕೂ ಪೂರ್ವದಲ್ಲಿಯೇ ಫೆಸಿಲಿಟೇಶನ್ ಸೆಂಟರ್‌ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡುವಂತಹ ಅವಕಾಶ ನೀಡಲಾಗುವುದು ಎಂದರು.

ಸಂಬಂಧಿಸಿದ ಇಲಾಖೆಯಿಂದ ನಮೂನೆ 12ಡಿ ನಮೂನೆಯನ್ನು ಪಡೆದು, ಸ್ವೀಕೃತಿ ನೀಡಬೇಕು. ಬಳಿಕ ಭರ್ತಿ ಮಾಡಿದ ನಮೂನೆಯನ್ನು ಆ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುವ ನೋಡಲ್ ಅಧಿಕಾರಿಗಳಿಗೆ ಆಯಾ ಇಲಾಖಾ ಅಧಿಕಾರಿಗಳು ಸಲ್ಲಿಸಬೇಕು. 12 ಡಿ ನಮೂನೆಯನ್ನು ಒಮ್ಮೆ ಸಲ್ಲಿಸಿದ ಬಳಿಕ, ಅಂತಹವರು, ಫೆಸಿಲಿಟೇಶನ್ ಸೆಂಟರ್‌ನಲ್ಲಿ ಅಥವಾ ಪೋಸ್ಟಲ್ ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು, ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದರು.