ಜಿಲ್ಲೆ

ಕ್ರಸ್ಟ್‌ಗೇಟ್ ಅಳವಡಿಕೆ ಸ್ಪಷ್ಟತೆ ನೀಡಲಿ

ಬಳ್ಳಾರಿ : ಪ್ರಸ್ತಕ ಸಾಲಿನಲ್ಲಿ ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್‌ಗಳ ಅಳವಡಿಕೆಯ ಬಗ್ಗೆ ರಾಜ್ಯ ಸರ್ಕಾರವು ರೈತರಿಗೆ ಸ್ಪಷ್ಟತೆ ನೀಡಬೇಕು ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ.ಆರ್.ಪುರುಷೋತ್ತಮಗೌಡ ಹೇಳಿದರು.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ತುಂಗಭದ್ರ ರೈತ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈವರೆಗೂ ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಸವುದರ ಬಗ್ಗೆ ಗಮನಹರಿಸುತ್ತಿಲ್ಲ. ಕ್ರಸ್ಟ್‌ಗೇಟ್‌ಗಳು ನಾಲ್ಕೈದು ದಶಕಗಳು ಕಳೆದಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಜಲಾಶಯ ಭರ್ತಿಯಾದರೆ ಮತ್ತೋಮ್ಮೆ ಕ್ರಸ್ಟ್‌ಗೇಟ್‌ಗಳಿಗೆ ಹಾನಿಯಾಗಲಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಆದ್ದರಿಂದ, ಈ ಬಾರಿ ರೈತರಿಗೆ ಎರಡು ಬೆಳೆ ಬೆಳೆಯಲು ನೀರು ಹರಿಸುವುದರ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಸದ್ಯ, 13 ಟಿಎಂಸಿ ನೀರು ಜಲಾಶಯದಲ್ಲಿ ತುಂಬಿದ್ದು 25 ಟಿಎಂಸಿ ಯಾದ ಬಳಿಕ ಜಲಾಶಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಸುವುದರಿಂದ ಮುಂಚಿತವಾಗಿಯೇ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದರು.

ಕೇವಲ ಕಾವೇರಿ ನೀರಿಗೆ ಮಾತ್ರ ಕಾಳಜಿ ವಹಿಸುವ ಡಿಸಿಎಂ ಡಿ.ಕೆ.ಶಿವಕುಮಾರ ಮೂರು ರಾಜ್ಯಗಳಿಗೆ ನೀರು ಉಣಿಸುವ ತುಂಗಭದ್ರ ಜಲಾಶಯದ ಮೇಲೆ ಏಕೆ ತಾತ್ಸರ ಎಂದು ಕಿಡಿಕಾರಿದರು. ಹೊಸ ಗೇಟ್‌ಗಳ ಬಗ್ಗೆ ಆಂಧ್ರ, ತೆಲಂಗಾಣ ಸಿಎಂ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದ ಡಿಕೆ ಶಿವಕುಮಾರ ಈವರೆಗೂ ಒಂದು ಸಭೆ ಕರೆದಿಲ್ಲ. ಕೆಲ ದಿನಗಳಲ್ಲಿಯೇ ರೈತರು ಹಾಗೂ ತುಂಗಭದ್ರ ಮಂಡಳಿಯೊಂದಿಗೆ ಸಭೆ ಕರೆದು ಚರ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪದಾಧಿಕಾರಿಗಳಾದ ಖಾಜವಲಿ, ಶರಣನಗೌಡ, ದೊಡ್ಡಮಲ್ಲಪ್ಪ, ಭೀಮನಗೌಡ, ಗೋವಿಂದಪ್ಪ , ಸಿದ್ದಯ್ಯಸ್ವಾಮಿ, ಜಾಲಿಹಾಳ್ ಶ್ರೀಧರಗೌಡ ಇದ್ದರು.