ಬಳ್ಳಾರಿ : ಸಂಡೂರು ವಿಧಾನಸಭೆ ಉಪಚುನಾವಣೆಯ ಬುಧವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿತು. ಒಟ್ಟಾರೆ ಮತದಾನ ಪ್ರಮಾಣ ಶೇಕಡವಾರು ಐದು ಗಂಟೆಯವರೆಗೆ 71.47% ನಡೆದಿತ್ತು.
ಸಂಡೂರು ಪಟ್ಟಣ, ಕುಡತಿನಿ, ತೋರಣಗಲ್ಲು , ಕೃಷ್ಣನಗರ, ಸುಶೀಲನಗರ, ಮತ್ತು ವಡ್ಡು ಗ್ರಾಮಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ಬಂದು ಮತ ಹಕ್ಕು ಚಲಾಯಿಸಿದ್ದು ಕಂಡು ಬಂತು. ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 186, 187, 188 ಮತ್ತು 189 ಮತಗಟ್ಟೆ ಕೇಂದ್ರಗಳಲ್ಲಿ ಮಹಿಳೆಯರು ಸಾಲಾಗಿ ಬಂದು ತಮ್ಮ ಮತ ಚಲಾವಣೆ ಮಾಡಿದರು. ಸುಶೀಲಾನಗರ ಗ್ರಾಮದಲ್ಲಿಯೂ ಮಹಿಳೆಯರು ಸಾಲು ನಿಂತು ಮತ ಚಲಾಯಿಸುವುದು ಕಂಡುಬಂದಿತು. ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಗೂ ಆರಂಭವಾದರೂ ಹಲವು ಮತಗಟ್ಟೆಗಳಲ್ಲಿ ನಿರಾಸ ಪ್ರತಿಕ್ರಿಯೆ ಕಂಡುಬಂದಿತು. ಸಂಜೆ ವೇಳೆಗೆ ತುಸು ವೇಗ ಪಡೆದು ಬಿರುಸಿನ ಮತದಾನ ಜರುಗಿತು. ಹಲವು ಮತಗಟ್ಟೆಗಳಲ್ಲಿ ಮಹಿಳೆಯರು ಹಾಗೂ ಪುರುಷರು ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು.
ಗಮನ ಸೆಳೆದ ಸಖಿ ಮತಗಟ್ಟೆ: ಉಪಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾರರು ಸಖಿ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿದರು. ಬಳಿಕ ಅಲ್ಲಿಯೇ ಸ್ಥಾಪಿಸಲಾಗಿದ್ದ ಪಿಂಕ್ ಸೆಲ್ಫಿ ಬೂತ್‌ನಲ್ಲಿ ನಿಂತುಕೊಂಡು ಮತಶಾಹಿ ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದು ಕಂಡುಬಂತು.
ಮೊದಲ ಬಾರಿ ಮತ ಚಲಾಯಿಸಿದ ಯುವತಿ : ಜಿಲ್ಲಾಡಳಿತವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಮತದಾರರ ಪಟ್ಟಿಯಲ್ಲಿ ಪ್ರಥಮ ಬಾರಿಗೆ ನೊಂದಾಯಿಸಿಕೊಂಡಿದ್ದ ಪಟ್ಟಣದ ಯುವತಿ ಅವನಿತ್ ಅವರು ಸಂಡೂರು ತಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 67 ರಲ್ಲಿ ಮೊದಲ ಬಾರಿಗೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದು, ಇದೇ ಮೊದಲ ಬಾರಿ ಮತ ಚಲಾಯಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.
ಹಿರಿಯ ವಯಸ್ಕರಿಂದ ಮತದಾನ: ಸಂಡೂರು ವ್ಯಾಪ್ತಿಯಲ್ಲಿ ವಿವಿಧೆಡೆ ಹಿರಿಯ ವಯಸ್ಕರು ತಮ್ಮ ಮತದಾನ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಕರ್ತವ್ಯ ಮೆರೆದರು. ಪಟ್ಟಣದ ಮತಗಟ್ಟೆ ಸಂಖ್ಯೆ 51 ರಲ್ಲಿ 91 ವರ್ಷದ ವಯೋವೃದ್ಧೆ ಹುಲಿಗೆಮ್ಮ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಕೃಷ್ಣಾನಗರ ಬಡಾವಣೆಯ ಸರ್ಕಾರಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 13 ರಲ್ಲಿ 78 ವರ್ಷದ ಲಥೀಫ್ ಸಾಬ್ ವೀಲ್‌ಚೇರ್ ಸಹಾಯದೊಂದಿಗೆ ಆಗಮಿಸಿ ಮತದಾನ ಮಾಡಿದರು.
ಮತದಾರರಿಗೆ ಮತ್ತು ಮತಗಟ್ಟೆ ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ನಿಭಾಯಿಸಲು ಆರೋಗ್ಯ ಇಲಾಖೆಯ ತಂಡದ ಜತೆಗೆ ವಿವಿಧ ಅಗತ್ಯದ ಔಷಧಿಗಳ ಮೆಡಿಕಲ್ ಕಿಟ್ ಜೊತೆಗೆ ಆಶಾ, ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.
ಜಿಲ್ಲಾಡಳಿತದಿಂದ ನೆರಳಿನ ಸೌಲಭ್ಯ ಇಲ್ಲದ ಕಡೆ ಶ್ಯಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಯಸ್ಕರಿಗೆ ಹಾಗೂ ವಿಶೇಷಚೇತನರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು.
ಬಾಕ್ಸ್ : ತಾಲೂಕಿನ ತಾರಾನಗರದಲ್ಲಿ ಬಿಜೆಪಿ ಕೇಸರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಸಿರು ಶಾಲು ಧರಿಸಿ ಮತಗಟ್ಟೆಗೆ ಆಗಮಿಸಿದರು. ಕೆಲವರು ಶಾಲು ಹಾಕಿಕೊಂಡಿಯೇ ಮತ ಚಲಾಯಿಸಿದ ಘಟನೆ ನಡೆಯಿತು. ಈ ವಿಷಯದ ಬಗ್ಗೆ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಪ್ರತಿಕ್ರಿಯಿಸಿ, ಮತದಾರರು ಎಲ್ಲ ತರಹದ ಶಾಲು ಧರಿಸಬಹುದು. ಆದರೆ, ಪಕ್ಷದ ಚಿಹ್ನೆಗಳನ್ನು ಹೊಂದಿರುವ ಶಾಲು ಧರಿಸಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದರು.