ಬಳ್ಳಾರಿ : ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಮಕ್ಕಳು ಶಿಕ್ಷಣ ತರಬೇತಿಗಳ ಜತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್ ಹೊಸಮನೆ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ ಸಮಿತಿ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ನಡೆದ ವಿವಿಧ ಸ್ಫರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿ ವಿವಿಧ ಕಲೆಗಳ ಪ್ರತಿಭೆ ಅಡಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಹೊರತರುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಮಕ್ಕಳಿಗೆ ವಿವಿಧ ಸ್ಪರ್ಧೆಗಳಾದ ಸೃಜನಾತ್ಮಕ ಪ್ರದರ್ಶನ ಕಲೆಗಳಾದ ಶಾಸ್ತ್ರಿಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರಿಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಾದ್ಯ ಕಲೆಗಳಾದ ವಾದ್ಯ ಸಂಗೀತ, ತಬಲಾ, ಮೃದಂಗ, ಕೀಬೋರ್ಡ, ಕೊಳಲು, ಡೊಳ್ಳು ಮತ್ತು ನಗಾರಿ, ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗಾಗಿ ವಿವಿಧ ಪ್ರಕಾರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ 135 ಮಕ್ಕಳು ಭಾಗವಹಿಸಿದ್ದರು. ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.