ಜಿಲ್ಲೆ

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಡಾ.ರಾಜ್‌ಕುಮಾರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಯಶ್ವಸಿಗೊಳಿಸಬೇಕು ಎಂದು ಎಸಿ ಪಿ.ಪ್ರಮೋದ್ ಹೇಳಿದರು.

ನಗರದ ಎಸಿ ಕಚೇರಿಯಲ್ಲಿ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇದೇ ಏ.24 ರಂದು ಜಿಲ್ಲಾಡಳಿತ ವತಿಯಿಂದ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಅಂದು ಡಾ.ರಾಜ್ ಕುಮಾರ್ ಉದ್ಯಾನವನದ ಬಳಿಯ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಗುವುದು. ಬಳಿಕ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗುವುದು.ರಾಜಕೀಯ ಮುಖಂಡರು, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಕನ್ನಡ ಭಾಷಾಭಿಮಾನ, ಕಲಾ ಪ್ರತಿಭೆ ಎಲ್ಲರಿಗೂ ಮನಮುಟ್ಟುವಂತಾದರೆ ಜಯಂತಿ ಆಚರಣೆಗೂ ಅರ್ಥ ಬರುತ್ತದೆ ಎಂದು ತಿಳಿಸಿದರು.

ಶಿಷ್ಠಾಚಾರದನ್ವಯ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಲಾಗುವುದು. ಕುಡಿವ ನೀರಿನ ವ್ಯವಸ್ಥೆ, ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಡಾ.ರಾಜ್ ಕುಮಾರ್ ಅವರ ಪುತ್ಥಳಿಯ ಸುತ್ತಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಮಾಲಾರ್ಪಣೆ ಮಾಡಲು ಶಾಶ್ವತ ಏಣಿ ವ್ಯವಸ್ಥೆ ಮಾಡಬೇಕು. ನಗರದಲ್ಲಿ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣಗೊಂಡು 18 ವರ್ಷ ಕಳೆದಿದ್ದು, ಆ ರಸ್ತೆಯ ಪ್ರಾರಂಭದಲ್ಲಿ ಡಾ.ರಾಜ್ ಕುಮಾರ್ ರಸ್ತೆ ಎಂದು ಮಹಾದ್ವಾರ ನಿರ್ಮಿಸಬೇಕು ಎಂದು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

ಡಾ.ರಾಜ್ ಕುಮಾರ್ ಅವರ ಜೀವನ ಚರಿತ್ರೆ ಕುರಿತು ತಿಳಿಸಲು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಬೇಕು. ಕಾರ್ಯಕ್ರಮ ಕುರಿತು ಹೆಚ್ಚಿನ ಪ್ರಚಾರ ನೀಡಲು ನಗರದ ಗಡಿಗಿ ಚೆನ್ನಪ್ಪ ವೃತ್ತ, ಎಚ್.ಆರ್.ಗವಿಯಪ್ಪ ವೃತ್ತ ಮತ್ತು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿ ಬ್ಯಾನರ್ ಅಳವಡಿಸಬೇಕು ಎಂದು ಮುಖಂಡರು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕರ್ನಾಟಕ ಯುವ ಸಂಘದ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್, ಕರ್ನಾಟಕ ಜನಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ‌್ರಿಸ್ವಾಮಿ ಇದ್ದರು.