ಜಿಲ್ಲೆ

ಪಂಚಾನ್ಹಿಕ ಮಹೋತ್ಸವ ಜೂ 02

ಎಸ್.ಎರ್ರಿಸ್ವಾಮಿ

ಬಳ್ಳಾರಿ: ಇಲ್ಲಿನ ಪಾರ್ಶ್ವನಾಥ್ ಜೈನ್ ಶ್ವೇತಾಂಬರ್ ಮಂದಿರದ ಶತಮಾನೋತ್ಸವದ ಹಿನ್ನೆಲೆ ಜೂ 2 ರಿಂದ 6ರವರೆಗೆ ಪೂಜ್ಯ ಶ್ರೀವಿಮಲ್ ಸಗರ್ ಸುರೀಶ್ವರ್ ಜೀ ಹಾಗೂ ಅವರ ಶಿಷ್ಯಂದಿರ ನೇತೃತ್ವದಲ್ಲಿ ಪಂಚಾನ್ಹಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರದ ಕಾರ್ಯದರ್ಶಿ ರೋಷನ್ ಜೈನ್ ಹೇಳಿದರು.

ನಗರದ ಶ್ರೀಪಾರ್ಶ್ವನಾಥ ಜೈನ ಶ್ವೇತಾಂಬರ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶತಮಾನೋತ್ಸವ ಹಿನ್ನೆಲೆ ಐದು ದಿನಗಳ ಕಾಲ ವಿವಿಧ ಪೂಜೆ ಕೈಂಕರ್ಯಗಳು ನಡೆಯಲಿವೆ. ಪ್ರಸಾದ ವ್ಯವಸ್ಥೆ ಇರುತ್ತದೆ. ಪ್ರತಿದಿನ ರಾತ್ರಿ 7.30ಕ್ಕೆ ಶ್ರೀಕೊಟ್ಟೂರುಸ್ವಾಮಿ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂ 5ರಂದು ಶೋಭಾಯಾತ್ರೆ ಬೆಳಗ್ಗೆ 8.30ಕ್ಕೆ ಆರಂಭವಾಗುತ್ತದೆ. ಶೋಭಾಯಾತ್ರೆಯು ಬೆಂಗಳೂರು ರಸ್ತೆ ಮಾರ್ಗವಾಗಿ ಜೈನ ಮಂದಿರದವರೆಗೆ ನಡೆಯಲಿದೆ ಎಂದು ವಿವರಿಸಿದರು.

ಶ್ರೀಪಾರ್ಶ್ವನಾಥ್ ಜೈನ ಶ್ವೇತಾಂಬರ್ ಸಂಘ ಹಾಗೂ ರಾಜಸ್ಥಾನ ಸಮಾಜದಿಂದ ಅನೇಕ ಸೇವಾ ಕಾರ್ಯಕ್ರಮ ನಡೆಯುತ್ತಿವೆ. ಕಳೆದ 15 ವರ್ಷದಿಂದ ಪ್ರತಿದಿನ ಬೆಳಗ್ಗೆ 11ಗಂಟೆಯಿಂದ 200 ಜನರಿಗೆ ರೋಟಿಘರ್ ಮೂಲಕ ಒಂದು ರೂಪಾಯಿಗೆ ಊಟ ನೀಡಲಾಗುತ್ತಿದೆ. ನಗರದ ಕಣೇಕಲ್ ರಸ್ತೆಯಲ್ಲಿ ಕಳೆದ 90 ವರ್ಷದಿಂದ ಗೋಶಾಲೆ ನಡೆಯುತ್ತಿದೆ. ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪದಾಧಿಕಾರಿಗಳಾದ ಅನಿಲ್, ಪ್ರಕಾಶ್ ಜೈನ್, ಭರತ್ ಇದ್ದರು.