ಜಿಲ್ಲೆ

ಬಂದ್‌ಗೆ ಬೆಂಬಲ ಕೋರಿ ಬಳ್ಳಾರಿಯಲ್ಲಿ ರೈತ ಸಂಘಟನೆಗಳ ಜಾಥಾ: ಅಂಗಡಿ ಮುಂಗಟ್ಟು ಮುಚ್ಚಲು ಕೋರಿಕೆ

ಬಳ್ಳಾರಿ: ರೈತ ವಿರೋಧಿ ಕಾಯ್ದೆ ವಿರೋಧಿಸಿ ಸೆ.28ರಂದು ಕರೆ ನೀಡಿರುವ ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲಿಸಬೇಕೆಂದು ಕೋರಿ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಭಾನುವಾರ ನಗರದಲ್ಲಿ ಜಾಥಾ ನಡೆಸಲಾಯಿತು.

ರೈತ ಹಾಗೂ ಕಾರ್ಮಿಕ ನಾಯಕರು ಡಬಲ್ ರಸ್ತೆಯಿಂದ ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ ಮೂಲಕ ಸಂಚರಿಸಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸಹಕಾರ ನೀಡಬೇಕೆಂದು ಕೋರಿದರು. ಈ ಕುರಿತು ಪ್ರತಿಕ್ರಿಯಿಸಿದ ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು, ಬೆಳಗ್ಗೆ ಆರು ಗಂಟೆಯಿಂದ ಮುಷ್ಕರ ಆರಂಭಿಸಲಾಗುವುದು ಎಂದು ತಿಳಿಸಿದರು.

ಕೆಲ ಸಂಘಟನೆಯವರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ರೈಲು ನಿಲ್ದಾಣದಲ್ಲೂ ಪ್ರತಿಭಟನೆ ನಡೆಸಲಿದ್ದು, ಬಳಿಕ ಗಡಿಗಿ ಚನ್ನಪ್ಪ ವೃತ್ತದಲ್ಲಿ ಧರಣಿ ಕುಳಿತುಕೊಳ್ಳಲಾಗುವುದು. ಬಂದ್‌ಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜತೆಗೆ ಎಲ್ಲ ಸಂಘಟನೆಗಳು ವೈಯಕ್ತಿಕವಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿವೆ ಎಂದು ಪುರುಷೋತ್ತಮಗೌಡ ದರೂರು ಹೇಳಿದರು.