ಜಿಲ್ಲೆ

ನಕಲಿ ವೈದ್ಯರಿಗೆ ಒಂದು ಲಕ್ಷ ರೂ. ದಂಡ

ಬಳ್ಳಾರಿ : ಜಿಲ್ಲೆಯಲ್ಲಿ ಪದವಿ ಇಲ್ಲದೆ ವೈದ್ಯ ವೃತ್ತಿ ಮಾಡುತ್ತಿದ್ದ ಆರು ಜನರಿಗೆ ಒಂದು ಲಕ್ಷ ರೂ. ದಂಡ ವಿಧಿಸಿ ಒಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕೆಪಿಎಮ್‌ಇ ಕಾಯ್ದೆ ನೊಂದಣಿ ಮತ್ತು ಕುಂದು ಕೊರತೆಗಳ ಪರಿಹಾರ ಸಮಿತಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಕಲಿ ವೈದ್ಯ ಬಸವರಾಜ ಮೇಲೆ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ನಕಲಿ ವೈದ್ಯರಾದ ರಾಜಣ್ಣ, ರೆಹಮಾನ್, ಶೆಕ್ಷಾವಲಿ, ಗುರು ಪ್ರಕಾಶ್, ಮಹಾದೇವ್ ಹಾಗೂ ಕೆ. ಚಂದ್ರಶೇಖರ್ ಸೇರಿ ಒಟ್ಟು ಆರು ಜನರಿಗೆ ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಯಾರಾದರು ಅಧೀಕೃತ ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುವವರ ಮನೆ, ಮಳಿಗೆ, ಇತರೆ ಯಾವುದೇ ರೀತಿಯ ಕಟ್ಟಡಗಳಿಗೆ ಆರೋಗ್ಯಾಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಬೇಕು. ಅಂತಹವರಿಗೆ ಬಾಡಿಗೆ ಕಟ್ಟಡ ನೀಡಿದ್ದಲ್ಲಿ ಕಟ್ಟಡ ಮಾಲೀಕರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.