ಬಳ್ಳಾರಿ : ಇತ್ತೀಚಿಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯಕ್ಕೆ ಹಣ ಕೊಡಲಿಲ್ಲವೆಂದು ಆರೋಪಿಗಳಿಬ್ಬರು ಅಪರಿಚಿತನನ್ನು 300 ರೂ. ಗೆ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇಲ್ಲಿನ ಹುಸೇನ್‌ನಗರದ ಬಾಲರಾಜ್(22) ಹಾಗೂ ಹನುಮಾನ್ ನಗರದ ಹನುಮಂತ (20) ಆರೋಪಿಗಳನ್ನು ಬಂಧಿಸಲಾಗಿದೆ. ಸೆ.5ರಂದು ಆರೋಪಿಗಳಿಬ್ಬರು ಹಾಗೂ ಅಪರಿಚಿತ ಸೇರಿ ಮದ್ಯ ಸೇವಿಸಿದ್ದರು. ಮತ್ತೆ ಮದ್ಯ ಸೇವನೆಗಾಗಿ ಮೃತನಿಗೆ 300 ರೂ. ಕೊಡಲು ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಒಪ್ಪಲಿಲ್ಲವೆಂದು ಆರೋಪಿಗಳು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿದ್ದರು. ಪ್ರಕರಣ ದಾಖಲೆಯಾದ ಒಂದೂವರೆ ದಿನದೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿ ಹಾಗೂ ಕುಟುಂಬದ ಬಗ್ಗೆ ಯಾವುದೇ ವಿವರ ಪತ್ತೆಯಾಗಿಲ್ಲ. ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
ಏನಿದು ಘಟನೆ : ಇಲ್ಲಿನ ರೂಪನಗುಡಿ ರಸ್ತೆಯಲ್ಲಿ ತಲೆ ಹಾಗೂ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೆ.5ರಂದು ನಡೆದಿತ್ತು. ಕೊಲೆಗೀಡಾದ ವ್ಯಕ್ತಿ ಅಪರಿಚಿತನಾಗಿದ್ದು, ಶವದ ಬಳಿ ರಕ್ತಸಿಕ್ತವಾದ ಕಲ್ಲು ದೊರೆತಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿ, ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಿದ್ದರು.
====