ಜಿಲ್ಲೆ

ಮಾರೆಮ್ಮ, ಸುಂಕ್ಲಮ್ಮ ದೇವಿ ಕುಂಭೋತ್ಸವ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ತಾಲೂಕಿನ ಕೊರ‌್ಲಗುಂದಿ ಗ್ರಾಮದ ಶ್ರೀಮಾರೆಮ್ಮ ಹಾಗೂ ಸುಂಕಲಮ್ಮ ದೇವಿಯ ಕುಂಭೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಗಂಗೆ ನೀರು ತಂದು ದೇವಿಯರ ಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು. ಬೆಳಗಿನ ಜಾವ ಡೊಳ್ಳು ವಾದ್ಯ ಮೇಳದೊಂದಿಗೆ ಕುಂಭತೋತ್ಸವ ಮೆರವಣಿಗೆ ನಡೆಯಿತು. ಹಲವು ಯುವಕರು ಹಾಗೂ ಮಹಿಳೆಯರು ಕುಂಭ ಹೊತ್ತು ಹರಕೆ ತೀರಿಸಿದರು. ಗ್ರಾಮದ ಎರಡು ದೇವಾಲಯಗಳ ಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಪಂ ಪ್ರತಿ ವಾರ್ಡ್‌ನಲ್ಲಿ ಕುಡಿವ ನೀರಿನ ಟ್ಯಾಂಕರ್ ವ್ಯವಸ್ಥೆ , ಊರ ಹೊರಗಡೆ ಸುತ್ತಲಿನ ಗ್ರಾಮಗಳಿಂದ ಬರುವ ಭಕ್ತರ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಸಂಜೆ ಅಭಿಮಾನ್ಯು ಕಾಳಗ ಬಯಲಾಟ ನಡೆಯಿತು.

ಸಂಚಾರಕ್ಕೆ ಪರದಾಟ : ಕುಂಭೋತ್ಸವ ಹಿನ್ನಲೆ ಗ್ರಾಮದ ರಸ್ತೆಯ ಎರಡು ಬದಿಗಳಲ್ಲಿ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಮುಂಜಾಗೃತ ಕ್ರಮವಾಗಿ ಯಾವುದೇ ಆದೇಶ ಹೊರಡಿಸದೆದ್ದರಿಂದ ಸುತ್ತಲಿನ ಗ್ರಾಮಸ್ಥರು ಜಿಲ್ಲಾ ಕೇಂದ್ರಗಳಿಗೆ ತಲುಪಲು ಪರದಾಡಿದರು. ಅಲ್ಲದೆ, ಬಸ್ ಸಂಚಾರಕ್ಕೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಡವಾಗಿ ತಲುಪಿದರು. ಮುಂಚಿತವಾಗಿಯೇ ರಸ್ತೆ ನಿರ್ಬಂಧ ಬಗ್ಗೆ ತಿಳಿಸದ ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕರು ಪ್ರಶ್ನಿಸಿದರು. ಇದಕ್ಕೆ ಪೊಲೀಸ್ ಪೇದೆಗಳು ಸಾರ್ವಜನಿಕರ ಮೇಲೆ ದರ್ಪ ತೋರಿದರು. ಸ್ಥಳಕ್ಕೆ ಮೋಕಾ ಪಿಎಸ್‌ಐ ಎ.ಕಾಳಿಂಗ ಭೇಟಿ ನೀಡಿ ಎರಡು ಬದಿಯಲ್ಲಿ ಸಂಚಾರಿಸಲು ಪರ್ಯಾಯ ರಸ್ತೆ ಕಲ್ಪಿಸಿ ಅನುಕೂಲ ಮಾಡಿಕೊಟ್ಟರು.