ಜಿಲ್ಲೆ

ಮಹನೀಯರ ಜಯಂತಿ ಅದ್ದೂರಿ ಆಚರಣೆ

ಬಳ್ಳಾರಿ ; ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಡಿಸಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಏ.05 ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಮತ್ತು ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಇದಕ್ಕೆ ಬೇಕಾದ ಸಕಲ-ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕಳೆದ ಎರಡು ವರ್ಷಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಆಯಾ ಸಮಿತಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಇಬ್ಬರ ಮಹನೀಯರ ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಆಳವಡಿಸಿಕೊಳ್ಳುವ ಮೂಲಕ ಎಲ್ಲರೂ ಸಂಘಟಿತರಾಗಿ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ತಪ್ಪದೇ ಭಾಗವಹಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಪ್ರತಿ ಗ್ರಾಪಂ ಮಟ್ಟದಲ್ಲಿ ಪರಿಣಾಮಕಾರಿಯಾಗಿ, ಅಚ್ಚುಕಟ್ಟಾಗಿ ಆಯೋಜಿಸುವಂತೆ ನಿರ್ದೇಶನ ನೀಡಲಾಗುವುದು. ಜಯಂತಿ ಅಂಗವಾಗಿ ನಗರದಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಮತ್ತು ಕಲಾವಿದರ ತಂಡಗಳನ್ನೊಳಗೊಂಡು ಅದ್ದೂರಿ ಮೆರವಣಿಗೆ ಆಯೋಜಿಸಲಾಗುವುದು ಎಂದರು.

ನಗರದ ನಲ್ಲಚೇರುವು ಪ್ರದೇಶದಲ್ಲಿರುವ ಡಾ.ಬಾಬು ಜಗನ್ ಜೀವನ್ ರಾಂ ಭವನದ ಮೇಲ್ಛಾವಣಿ ತಗಡಿನ ಶೀಟ್‌ನಿಂದ ಕೂಡಿದ್ದು, ಸೂಕ್ತವಾಗಿರದ ಕಾರಣ ಕೂಡಲೇ ಬದಲಾಯಿಸಿ ಸಿಮೆಂಟ್‌ನಿಂದ ಮೇಲ್ಛಾವಣಿ ನಿರ್ಮಿಸಬೇಕು. ಅದರಂತೆ ನಗರದ ಮೊದಲನೇ ಗೇಟ್ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ದುರಸ್ತಿ ಕಾರ್ಯವು ವೇಗ ನೀಡಬೇಕು. ಮಹನೀಯರ ಜಯಂತಿಯ ಕಾರ್ಯಕ್ರಮ ಗ್ರಾಮಮಟ್ಟದಲ್ಲಿ ಸರಿಯಾಗಿ ಆಯೋಜಿಸುತ್ತಿಲ್ಲ. ಅಲ್ಲದೆ, ವಿಚಾರಧಾರೆಗಳನ್ನು ಯುವ ಸಮುದಾಯ ಮತ್ತು ಮಕ್ಕಳಿಗೆ ತಲುಪಿಸುವ ವಿಚಾರ ಸಂಕಿರಣದಂತಹ ಕಾರ್ಯಕ್ರಮ ಆಯೋಜಿಸಿ ಮಾಹಿತಿ ತಲುಪಿಸುವ ಕೆಲಸವಾಗಬೇಕು ಎಂದು ಸಮುದಾಯದ ಮುಖಂಡರು ಸಭೆಗೆ ಪ್ರಸ್ತಾಪಿಸಿದರು.