ಜಿಲ್ಲೆ

ಬಿಸಿಎಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ : ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಲೋಕೇಶ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.

ಇಲ್ಲಿನ ರಾಮಾಂಜನೇಯನಗರದ ನಿವಾಸ ಮಾತ್ರ ಅಲ್ಲದೆ, ಅವರ ಸಂಬಂಧಿಕರ ಹಾಗೂ ಅಪ್ತ ನಾಲ್ವರ ನಿವಾಸಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಆರಂಭಿಸಿದ್ದಾರೆ. ಅದಾಯಕ್ಕಿಂತ ಹೆಚ್ಚಿನ ಸಂಪಾದನೆ ಮಾಡಿದ್ದರಿಂದ ದಾಳಿ ನಡೆಸಲಾಗಿದೆ. ಚಿನ್ನಾಭರಣ, ನಗದು ಹಾಗೂ ಅಪಾರ ಪ್ರಮಾಣದ ಆಸ್ತಿಯ ದಾಖಲೆ ಪತ್ರಗಳ ವಶಪಡಿಸಿಕೊಂಡು ಪರಿಶೀಲಿಸಲಾಗಿದ್ದು ಸಂಜೆಯವರೆಗೆ ಮುಂದುವರೆಯಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿದವು.

ಅಧಿಕಾರಿ ಮೇಲೆ ಆರೋಪ : ಕಳೆದ ವರ್ಷ ಲೋಕೇಶ್ ಹುಟ್ಟುಹಬ್ಬ ದಿನದಂದು ವಸತಿ ನಿಲಯ ವಿದ್ಯಾರ್ಥಿನಿಯರು ಹೂ ಮಳೆ ಸುರಿಸಿ ಸ್ವಾಗತಿಸಿದ್ದರು. ಇದಕ್ಕೆ ನಿಲಯದ ವಾರ್ಡ್‌ನ್ ಚಪ್ಪಾಳೆ ಬಡಿದು ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಯಾಗಿದೆ. ಈ ರೀತಿ ಮಾಡದಿದ್ದರೆ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳ ಬೆಂಬಲ ಕೂಡ ಇದೆ ಎಂಬುದಾಗಿ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು. ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಭಾವಗೊಂಡಿದ್ದರು. ಅಂತರಿಕವಾಗಿ ಇಲಾಖೆಯ ವಲಯದಲ್ಲಿ ಪ್ರಭಾವಕ್ಕೆ ಒಳಗಾಗಿ ವರ್ಗಾವಣೆ ದಂಧೆ ಮಾಡುತ್ತಿದ್ದರು ಎಂಬ ಆರೋಪವು ಮೇಲಿದೆ. ಕೆಲ ದಿನಗಳ ಹಿಂದೆ ಇಲಾಖೆಯ ಅನುಮತಿ ಪಡೆಯದೆ ವಿದೇಶಿ ಪ್ರವಾಸಕ್ಕೂ ಹೊರಟಿದ್ದರು ಎನ್ನಲಾಗಿದೆ. ಈ ದಾಳಿಯ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಲೋಕೇಶ್ ಮನೆಯಲ್ಲಿ ಇರಲಿಲ್ಲ , ದಾಳಿಯ ಬಗ್ಗೆ ಮಾಹಿತಿ ಸೋರಿಕೆಯಾಗಿ ಎಂದು ಹೇಳಲಾಗುತ್ತಿದೆ.