ಬಳ್ಳಾರಿ ; ಮಹಾವೀರ ಜಯಂತಿ ಕೇವಲ ಧಾರ್ಮಿಕ ಹಬ್ಬವಲ್ಲ, ಬದಲಾಗಿ ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವ ದಿನವಾಗಿದ್ದು, ಸತ್ಯ, ಕ್ಷಮೆ ಮತ್ತು ಭೌತಿಕತೆಯಿಂದ ನಿರ್ಲಿಪ್ತತೆಯ ಮಾರ್ಗವನ್ನು ಅನುಸರಿಸುವ ಮೂಲಕ ಸರಳ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಕಲಿಸುತ್ತದೆ ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಶ್ರೀ ಪಾರ್ಶ್ವನಾಥ ಭವನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾವೀರರು ತಮ್ಮ 30 ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಹುಡುಕುತ್ತಾ ತಮ್ಮ ಐಷರಾಮಿ ಜೀವನವನ್ನು ತ್ಯಜಿಸಿ 12 ವಷಢಗಳ ತೀವ್ರ ಧ್ಯಾನ ಮತ್ತು ತಪಸ್ಸಿನ ನಂತರ, ಅವರು ಕೇವಲ ಜ್ಞಾನ ಪಡೆದು ತಮ್ಮ ಜೀವನದ ಉಳಿದ ಭಾಗವನ್ನು ಅಹಿಂಸೆ, ಸತ್ಯ ಮತ್ತು ಸ್ವಯಂ-ಶಿಸ್ತಿನ ಬೋಧನೆಗಳನ್ನು ಹರಡಲು ಕಳೆದರು ಎಂದು ಮಹಾವೀರರ ಜೀವನದ ಬಗ್ಗೆ ಪರಿಚಯಿಸಿದರು.
ಸಾಧ್ವಜಿ ಶ್ರೀಸೂರ್ಯಪ್ರಭ ಶ್ರೀಜಿ ಮಾತನಾಡಿ, ಜೈನ ಧರ್ಮದ ಇಪ್ಪತ್ತನಾಲ್ಕನೇ ತೀರ್ಥಂಕರರಾದ ಭಗವಾನ್ ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದವರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ್ದ ಭಗವಾನ್ ಮಹಾವೀರರು ಅಹಿಂಸೆ, ಪ್ರೀತಿ ಮತ್ತು ತಪಸ್ವಿ ಆಗಿದ್ದರು ಎಂದರು.
ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡು ನಗರದಲ್ಲಿ ಸಂಭ್ರಮದಿಂದ ನಡೆಯಿತು.