ಬಳ್ಳಾರಿ : ಜಿಲ್ಲೆಯ ಪ್ರತಿ ಗ್ರಾಪಂ ಯಲ್ಲಿ ಮಕ್ಕಳು ಹಕ್ಕು ಕಾವಲು ಸಮಿತಿ ಸಮರ್ಥವಾಗಿ ನಿಭಾಯಿಸಿದರೆ ಮಕ್ಕಳ ರಕ್ಷಣೆ ಸಾಧ್ಯ ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೈರ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಗ್ರಾಪಂ ಪಿಡಿಒ, ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ಕುರಿತು ಸೋಮವಾರ ಆಯೋಜಿಸಿದ್ದ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳು ಹೆಣ್ಣು ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಪೋಕ್ಸೋ, ಬಾಲ್ಯವಿವಾಹ, ಬಾಲ ಗರ್ಭಿಣಿಯಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಂಚಾಯಿತಿ ಮಟ್ಟದ ಕಾವಲು ಸಮಿತಿ ಮೂಲಕ ಕ್ರಮ ವಹಿಸಿ. ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊಂದಬೇಕಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾ ದೇವಿ ಮಾತನಾಡಿ, ಜಿಲ್ಲೆಯಲ್ಲಿ (ಏಪ್ರಿಲ್ ನಿಂದ ಇಲ್ಲಿಯವರೆಗೆ) 83 ಬಾಲ್ಯವಿವಾಹ ನಡೆದಿವೆ. ಅದರಲ್ಲಿ 64 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. 19 ಪ್ರಕರಣ ಬಾಲ್ಯವಿವಾಹ ಮತ್ತು ಪೋಕ್ಸೋ ಒಳಗೊಂಡಿದ್ದು, 9 ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ. 10 ಪ್ರಕರಣ ಎಫ್‌ಐಆರ್ ದಾಖಲಿಸಲು ಬಾಕಿಯಿವೆ ಎಂದು ಹೇಳಿದರು.
ಬಳಿಕ ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಕಾನೂನು ಸೇವೆಯ ಸಹಾಯವಾಣಿ ಸಂಖ್ಯೆ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಕೊಪ್ಪಳದ ಮಕ್ಕಳ ಸಂರಕ್ಷಣಾ ಯೋಜನೆಯ ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ.ರಾಘವೇಂದ್ರ ಭಟ್ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ಹಾಗೂ ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಒದಗಿಸಿದರು.