ಬಳ್ಳಾರಿ ; ಜಿಲ್ಲೆಯಲ್ಲಿನ ಸಣ್ಣ ನೀರಾವರಿ ಹಾಗೂ ನೀರಿನ ಆಸರೆಗಳ ಗಣತಿ ಕಾರ್ಯ ಅಚ್ಚುಕಟ್ಟಾಗಿ ನಡೆಯಲಿ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏಳನೇ ಸಣ್ಣ ನೀರಾವರಿ ಮತ್ತು ಎರಡನೇ ನೀರಿನ ಆಸರೆಗಳ ಗಣತಿ ಕಾರ್ಯದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಗಣತಿ ಕಾರ್ಯ ಮಾಡುವ ಮೇಲ್ವಿಚಾರಕರಿಗೆ ಮತ್ತು ತಾಲೂಕು ಮಟ್ಟದಲ್ಲಿ ಗಣತಿ ಕಾರ್ಯ ಕೈಗೊಳ್ಳುವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಗಣತಿ ಕಾರ್ಯ ವಿಧಾನದ ಕುರಿತು ಸೂಕ್ತ ತರಬೇತಿ ಹೊಂದಬೇಕು ಎಂದರು.
ಕಂದಾಯ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಗಳು ರಾಜ್ಯದ ಹಿತದೃಷ್ಟಿಯಿಂದ ಈ ಎಲ್ಲನ ಇಲಾಖೆಗಳ ಸಮನ್ವಯದೊಂದಿಗೆ ಗಣತಿ ಕ್ಷೇತ್ರ ಕಾರ್ಯ ಕೈಗೊಳ್ಳಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪತ್ರಿಬಸಪ್ಪ ಮಾತನಾಡಿ, ಪ್ರಸ್ತುತ ಗಣತಿಯನ್ನು ಡಿಜಿಟಲ್ ಮೋಡ್ ನೊಂದಿಗೆ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ಸಿಬ್ಬಂದಿಗೆ ತರಬೇತಿ ಏರ್ಪಡಿಸಲಾಗುವುದು ಎಂದರು.
40 ಹೆಕ್ಟೇರ್‌ವರೆಗಿನ ಅಚ್ಚುಕಟ್ಟು ಇರುವ ಯೋಜನೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿರುತ್ತದೆ. 40 ಹೆಕ್ಟೇರ್‌ಗಳಿಗೆ ಮೇಲಿನ 2 ಸಾವಿರ ಹೆಕ್ಟೇರ್‌ವರೆಗಿನ ಅಚ್ಚುಕಟ್ಟು ಇರುವ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತವೆ. 2ಸಾವಿರ ಹೆಕ್ಟೇರ್‌ಗಳಿಗೆ ಮೇಲಿನ ಅಚ್ಚುಕಟ್ಟು ಇರುವ ಯೋಜನೆಗಳು ಬೃಹತ್ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತವೆ ಎಂದು ತಿಳಿಸಿದರು. ಬಳಿಕ ಗಣತಿ ಕಾರ್ಯದ ಕುರಿತು ತರಬೇತಿ ನೀಡಿದರು.