ಬಳ್ಳಾರಿ ; ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆ, ಜೀವನಶೈಲಿ, ವೈಚಾರಿಕತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕವಾಗುತ್ತದೆ ಎಂದು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎನ್.ಬಿ.ಶಿವರುದ್ರಪ್ಪ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಕನಸು ನನಸ್ಸಾಗಿಸಬೇಕು ಎಂಬುದು ಅಂಬೇಡ್ಕರ್ ಅವರ ಧ್ಯೇಯವಾಗಿತ್ತು. ಸತ್ಯ ಮಾರ್ಗದಲ್ಲಿ ನಡೆದರೆ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು ಎಂದರು.
ನ್ಯಾಯಯುತ ಮತ್ತು ಸಮಸಮಾಜದ ಅವರ ದೃಷ್ಟಿಕೋನವನ್ನು ವಾಸ್ತವಗೊಳಿಸಲು ನಾವೆಲ್ಲ ಶ್ರಮಿಸೋಣ. ಸಮಾನತೆ, ನ್ಯಾಯ, ಶಿಕ್ಷಣ, ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಅವರ ಕೊಡುಗೆಗಳು ಬಹು ಮುಖ್ಯವಾಗಿದೆ ಎಂದು ಹೇಳಿದರು.
ಅವರ ಕೆಲಸ ಮತ್ತು ಆದರ್ಶಗಳು ದೇಶದ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದಿನ ಪ್ರಬಲ ಭಾರತವನ್ನು ರೂಪಿಸುವಲ್ಲಿ ಅಂಬೇಡ್ಕರ್‌ರವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ಭಾರತದ ಪ್ರಜೆಗಳು ಎಲ್ಲರೂ ಏಕತೆ, ಸಹೋದರತ್ವವನ್ನು ಹೊಂದಬೇಕು. ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿದರೆ ಮಾತ್ರ ಉತ್ತಮ ದೇಶವನ್ನು ಕಟ್ಟುವುದು ಸಾಧ್ಯ. ಉತ್ತಮ ಶಿಕ್ಷಣವು ಎಲ್ಲರಿಗೂ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಶ್ರಮಿಸುತ್ತಿದೆ. ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು ಎಂದು ಸಲಹೆ ನೀಡಿದರು.