ಜಿಲ್ಲೆ

ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಅರಿಯಿರಿ

ಬಳ್ಳಾರಿ : ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು, ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್‌ಅವರು ರಚಿಸಿದ ಸಂವಿಧಾನದ ಪೀಠಿಕೆ, ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು. ಸಂವಿಧಾನದ ಪೀಠಿಕೆ, ಆಶೋತ್ತರಗಳನ್ನು ಜನರಿಗೆ ತಿಳಿಸಲು ಗ್ರಾಪಂ ಮಟ್ಟದಲ್ಲಿಯೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರವು ಸಂವಿಧಾನ ಓದು ಕಿರು ಪುಸ್ತಕಗಳನ್ನು ಮುದ್ರಿಸಿ ಮನೆ ಬಾಗಿಲಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಇಲ್ಲಿನ ಡಾ.ರಾಜ್‌ಕುಮಾರ್ ಉದ್ಯಾನವನದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸರ್ಕಾರದಿಂದ ಅನುಮೋದಿತ (ಅಂದಾಜು 10*12 ಅಡಿ ಆಳತೆಯ) ಭಾರತ ಸಂವಿಧಾನ ಪೀಠಿಕೆಯನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ 26ನೇ ಜನವರಿ 2025ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಡಿಸಿ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, ದೇಶದಲ್ಲಿ ಸಂವಿಧಾನವು ಸವೋಚ್ಛ ಕಾನೂನು ಆಗಿದೆ. ಸಂವಿಧಾನವು ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಲಭಿಸಿದೆ. ಸಂವಿಧಾನದಲ್ಲಿ ಎಲ್ಲ ಸಿದ್ಧಾಂತ ಅಡಗಿದ್ದು, ನಮಗೆ ಎಲ್ಲ ಬಗೆಯ ಸ್ವಾತಂತ್ರೃ ಸಿಕ್ಕಿದೆ ಎಂದರೆ ಅದು ಸಂವಿಧಾನದಿಂದ ಮಾತ್ರ. ಹಾಗಾಗಿ ಪ್ರತಿದಿನ ಸಂವಿಧಾನವನ್ನು ನೆನಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಐ. ಹೊನ್ನುರು ಆಲಿ, ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯ ತಜ್ಞ ಡಾ.ಎನ್. ಎಲ್. ರಾಜೇಂದ್ರ ಪ್ರಸಾದ್ ಸಂವಿಧಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸಂವಿಧಾನದ ಪೀಠಿಕೆ ಭೋದಿಸಿದರು. ಬಳಿಕ ಶಾಲಾ ಮಕ್ಕಳಿಗೆ ಸಂವಿಧಾನ ಓದು ಪುಸ್ತಕಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಲ್ಲಚೇರುವು ಪ್ರದೇಶದ ಡಾ.ಬಾಬು ಜಗನಜೀವನ ರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ನಂತರ ವಾಲ್ಮೀಕಿ ಮುಂಭಾಗ ಬಸ್‌ಗಳಿಗೆ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರ ಅಂಟಿಸಿದರು. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.