ಜಿಲ್ಲೆ

ಹೈವೊಲ್ಟೇಜ್ ಕ್ಷೇತ್ರಕ್ಕೆ ನಾಯಕರ ಕೊರತೆ

ಬಳ್ಳಾರಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾದ ಬಳ್ಳಾರಿ ಗ್ರಾಮೀಣವು ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಲ್ಲದೆ ಸೊರಗುತ್ತಿದೆ.

ಜಿಲ್ಲೆಯ ಗ್ರಾಮೀಣ ಕ್ಷೇತ್ರ ಎಸ್‌ಟಿ ಮೀಸಲಾತಿಯಾಗಿದ್ದರಿಂದ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ.ನಾಗೇಂದ್ರ, ಬಿಜೆಪಿಯಿಂದ ಮಾಜಿ ಸಚಿವ ಶ್ರೀರಾಮುಲು ಸ್ಪರ್ಧೆಯ ಕಾರಣದಿಂದ ಜಿದ್ದಾಜಿದ್ದಿಯಿಂದ ಏರ್ಪಟ್ಟಿತ್ತು. ಅಲ್ಲದೆ, ಹಲವು ಚುನಾವಣೆಗಳಲ್ಲಿ ಪರಾಭವಗೊಳ್ಳದ ಒಂದೇ ಸಮುದಾಯದ ಎರಡು ನಾಯಕರ ಸ್ಪರ್ಧೆಯು ಕೂಡ ಅಗಿತ್ತು. ಈ ಕ್ಷೇತ್ರವನ್ನು ತೆಕ್ಕೆಗೆ ಪಡೆಯಲು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ, ಬಿಜೆಪಿಯಿಂದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅಬ್ಬರ ಪ್ರಚಾರ ನಡೆಸಿ ರಂಗೇರಿಸಿದ್ದರು. ಒಟ್ಟಾರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಕ್ಷೇತ್ರದಿಂದ ಹಲವು ವರ್ಷ ದೂರವಿದ್ದ ಎಂಬ ಪ್ರಮುಖ ಕಾರಣದಿಂದ ರಾಮುಲುಗೆ ಸೋಲಾಯಿತು. ಈ ಫಲಿತಾಂಶವು ಗೆದ್ದ ಅಭ್ಯರ್ಥಿ ರಾಜಕೀಯದಲ್ಲಿ ಉತ್ತುಂಗಕ್ಕೆ ಏರಿದರೆ, ಮತ್ತೊಬ್ಬ ಸೋತ ಅಭ್ಯರ್ಥಿಯು ನಿಧಾನಗತಿಯಲ್ಲಿ ರಾಜಕೀಯ ಅವನತಿ ಶುರುವಾಗುತ್ತ ಬಂತು.

ಕ್ಷೇತ್ರದಲ್ಲಿ ಕಾಣಿಸದ ಶಾಸಕ : ಸತತ ಮೂರನೇ ಬಾರಿ ಹಾಗೂ ಬಿಜೆಪಿಯ ಪ್ರಮುಖ ನಾಯಕ ರಾಮುಲು ಅವರನ್ನು ಸೋಲಿಸಿದ್ದಾರೆ ಎಂಬ ಕಾರಣದಿಂದ ಮೊದಲ ಸಚಿವ ಸಂಪುಟದಲ್ಲೇ ಬಿ.ನಾಗೇಂದ್ರ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರಂಭದಲ್ಲೇ ಜಿಲ್ಲೆಯ ವಿವಿಧಡೆ, ಸ್ವಕ್ಷೇತ್ರದ ಕಡೆಗೆ ನಾಗೇಂದ್ರ ಗಮನಹರಿಸಿದ್ದರು. ವರ್ಷ ಕಳೆಯುವ ವೇಳೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಸಚಿವ ಸ್ಥಾನಕ್ಕೆ ರಾಜೀನಾಮೆ, ಜೈಲು ಸೆರೆವಾಸ ಅನುಭವಿಸಿ ಬಿಡುಗಡೆಗೊಂಡ ಬಳಿಕ ಸ್ವಕ್ಷೇತ್ರದ ಮರಳಿ ಕೂಡ ಭೇಟಿ ನೀಡಿಲ್ಲ. ವಿಧಾನಸಭಾ ಸಂಡೂರು ಉಪಚುನಾವಣೆಯಲ್ಲಿ ಮಾತ್ರ ಕೆಲ ಬಹಿರಂಗಸಭೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಅಲ್ಲದೆ, ಇತ್ತೀಚೆಗೆ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮರಳಿ ಸಚಿವ ಸ್ಥಾನ ಪಡೆಯಲು ಕೇಂದ್ರ ಹಾಗೂ ರಾಜ್ಯ ನಾಯಕರ ಭೇಟಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ಕೆಲವೇ ದಿನಗಳಲ್ಲೇ ಜಿಪಂ ಹಾಗೂ ತಾಪಂ ಚುನಾವಣೆ ದಿನಾಂಕ ಘೋಷಣೆಯಾಗಲಿದ್ದು, ಗೆದ್ದ ಬಳಿಕ ಕ್ಷೇತ್ರಕ್ಕೆ ಕಾಲಿಡದೆ ಶಾಸಕರನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದರೆ ಅಭ್ಯರ್ಥಿ ಗೆಲವು ಕಷ್ಟವಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.

ರಾಮುಲು ಕ್ಷೇತ್ರ ಬಿಡುವುದಕೆ ? : ರಾಮುಲುಗೆ ರಾಜಕೀಯ ಭವಿಷ್ಯ ರೂಪಿಸಿದ ಕ್ಷೇತ್ರವನ್ನೇ ಬಿಡಲು ನಿರ್ಧಾರ ಮಾಡಿರುವುದು ಏಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಸದ್ಯ ಗ್ರಾಮೀಣ ಕ್ಷೇತ್ರ ಕಳೆದ ಎರಡು ಬಾರಿ ಕೈವಶಯಾಗಿದೆ. 2018ರ ಚುನಾವಣೆಯಲ್ಲಿ ಮಾಜಿ ಸಂಸದ ಸಣ್ಣಫಕೀರಪ್ಪ ಎರಡು ಸಾವಿರ ಮತಗಳ ಅಂತರದಲ್ಲಿ ಸೋತರೆ, 2023 ರಾಮುಲು ಮೂವತ್ತು ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರಿಂದ ಬಿಜೆಪಿ ಮತಗಳು ಕಾಂಗ್ರೆಸ್‌ಗೆ ವಾಲಿವೆ. ಅಲ್ಲದೆ, ಗ್ರಾಮೀಣ ಕ್ಷೇತ್ರದಲ್ಲಿ ಮುಸ್ಲಿಂ, ದಲಿತ, ಕುರುಬರ ಮತಗಳು ಹೆಚ್ಚಿದ್ದು ಸದ್ಯದ ಮಟ್ಟಿಗೆ ಬಿಜೆಪಿಗೆ ಮತಗಳಾಗಿ ಬದಲಾವಣೆಯಾಗುವುದು ಬಹುತೇಕ ಕಷ್ಟ. ಇದಲ್ಲದೆ, ಶಾಸಕ ಜನಾರ್ದನರೆಡ್ಡಿ ಹಾಗೂ ರಾಮುಲು ನಡುವೆ ಇರಿಮುರಿಸು ಮೂಡಿರುವುದರಿಂದ ರೆಡ್ಡಿಯ ಕೆಲ ಬೆಂಬಲಿಗರೆ ರಾಮುಲು ಅವರನ್ನು ಸೋಲಿಸಲು ಯತ್ನಿಸಬಹುದು ಎಂಬ ಅನುಮಾನವಿದೆ. ಇನ್ನೂ ಕೆಲವೇ ದಿನಗಳಲ್ಲೇ ತಾಪಂ, ಜಿಪಂ ಚುನಾವಣೆ ಬರಲಿದ್ದು ರಾಮುಲು ಗ್ರಾಮೀಣದ ಉಪಸ್ಥಿತಿ ವಹಿಸಿಕೊಂಡರೆ ರೆಡ್ಡಿ ಮುನಿಸು ನಡುವೆ ಕಾಂಗ್ರೆಸ್‌ಗೆ ವರವಾಗಿ ಕೈವಶಯಾದರೆ ಹೈಕ್‌ಮಾಂಡ್ ಹಾಗೂ ರಾಜ್ಯ ನಾಯಕರ ಮುಂದೆ ಮತ್ತೆ ಸೋಲಿನ ಹಣೆಪಟ್ಟಿಯನ್ನು ರಾಮುಲು ಹೊರಬೇಕಾಗುತ್ತದೆ. ಆದ್ದರಿಂದ, ಈಗಿನಿಂದಲೇ ಕ್ಷೇತ್ರ ಬಿಡುವುದಾಗಿ ಹೇಳಿದರೆ ತಾಪಂ, ಜಿಪಂ ಫಲಿತಾಂಶ ರಾಜ್ಯ ಬಿಜೆಪಿಯ ವಹಿಸಿಕೊಳ್ಳಲಿದೆ ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರದಾಗಿದೆ.