ಜಿಲ್ಲೆ

ಪಾಲಿಕೆಯಲ್ಲಿ ಎಂಜನಿಯರ್‌ಗಳ ಕೊರತೆ

ಬಳ್ಳಾರಿ : ಮಹಾನಗರ ಪಾಲಿಕೆಯಲ್ಲಿ ಎಂಜನಿಯರ್‌ಗಳ ಕೊರತೆಯಿಂದ ನಗರದಲ್ಲಿ ಕೈಗೊಂಡಿರುವ ಬಹುತೇಕ ಕಾಮಗಾರಿಗಳು ನಿಗದಿತ ಕಾಲದಲ್ಲಿಯೇ ಪೂರ್ಣಗೊಳಿಸಲು ಅಧಿಕಾರಿಗಳು ಹರಸಾಹಸ ಪಡಬೇಕಿದೆ.

ಇಲ್ಲಿನ ಪಾಲಿಕೆಗೆ 39 ವಾರ್ಡ್‌ಗಳು ಒಳಪಟ್ಟಿರುವುದರಿಂದ ಅಭಿವೃದ್ಧಿ ದೃಷ್ಟಿಯಿಂದ ಮೂರು ವಲಯಗಳ ಆಗಿ ವಿಂಗಡಿಸಲಾಗಿದೆ. ಗಡಗಿ ಚೆನ್ನಪ್ಪ ವೃತ್ತ, ಗಾಂಧಿನಗರ ಹಾಗೂ ಸುಧಾ ಕ್ರಾಸ್ ಮೊದಲ ಗೇಟ್ ಸೇರಿ ಮೂರು ವಲಯಗಳ ಕಚೇರಿಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಾಗುತ್ತಿದೆ. ಪಾಲಿಕೆಯಲ್ಲಿ ಒಟ್ಟು 45 ಎಂಜನಿಯರ್‌ಗಳ ಹುದ್ದೆಗಳಿದ್ದು, ಕೇವಲ ಒಂಬತ್ತು ಜನರು ಕಾರ್ಯ ನಿರ್ವಹಿಸುತ್ತಿದ್ದು, 36 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಮುಖ್ಯವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂಬತ್ತರಲ್ಲಿ ಒಬ್ಬರು ಹೆರಿಗೆ ರಜೆಯಲ್ಲಿದ್ದು, ಇನ್ನೂಬ್ಬರು ಮದುವೆಗಾಗಿ ರಜೆ ಪಡೆದು ಊರಿಗೆ ತೆರಳಿದ್ದಾರೆ. ಸದ್ಯ, ಕೇವಲ ಏಳು ಜನರು ಸದ್ಯ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಏಳು ಎಂಜನಿಯರ್‌ಗಳಲ್ಲಿ ಕೇವಲ ಇಬ್ಬರು ಮಾತ್ರ ಹುದ್ದೆಯ ಅನುಭವ ಹೊಂದಿದ್ದು ಉಳಿದವರು ಹೊಸದಾಗಿ ನೇಮಕಗೊಂಡಿರುವುದರಿಂದ ಅನುಭವದ ಕೊರತೆಯಿದೆ. ಇದಲ್ಲದೆ, ಹೊಸದಾಗಿ ನೇಮಕರಾದ ಎಂಜನಿಯರ್‌ಗಳು ಬಹುತೇಕರು ಮಹಿಳೆಯರು ಆಗಿರುವುದರಿಂದ ಹೆಚ್ಚಿನ ಕಾರ್ಯಭಾರದ ಒತ್ತಡ ಹಾಕುವಂತಿಲ್ಲ. ಒಂದು ವಾರದಲ್ಲಿಯೇ ಪೂರ್ಣಗೊಳ್ಳುವ ಕಾಮಗಾರಿಯು ತಿಂಗಳಗಟ್ಟಲೇ ತೆಗೆದುಕೊಳ್ಳಲಾಗುತ್ತದೆ. ಕನ್ಸಲೆಟಿಂಗ್‌ಎಂಜನಿಯರ್‌ಗಳು ತೆಗೆದುಕೊಳ್ಳಬಹುದು. ಆದರೆ, ಕೆಲಸ ಪೂರ್ಣಗೊಂಡ ಕೂಡಲೇ ಹಣ ಕೇಳುವುದರಿಂದ ನೇಮಿಸಿಕೊಳ್ಳಲು ಪಾಲಿಕೆ ಹಿಂದೇಟು ಹಾಕಿದೆ.

ಎಂಜನಿಯರ್‌ಗಳಿಗೆ ಹೆಚ್ಚಿದ ಒತ್ತಡ : ನಗರವು ದಿನೇದಿನೇ ಬೆಳೆಯುತ್ತಿರುವುದು ಒಂದಡೆಯಾದರೆ ಅದಾಯವು ಕೂಡ ಪಾಲಿಕೆಗೆ ಹೆಚ್ಚುತ್ತಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬಾರಜು, ಒಳಚರಂಡಿ, ಕಸ ತ್ಯಾಜ್ಯ ನಿರ್ವಹಣೆ, ಸ್ವಚ್ಚತೆ, ಕಾಲನಿಯ ಬೀದಿ ರಸ್ತೆಗಳ ಕಾಮಗಾರಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಅಲ್ಲದೆ, ದಿನಾಲೂ ಪ್ರತಿ ಮೂರ‌್ನಾಲ್ಕು ವಾರ್ಡ್‌ಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಉಂಟಾಗಿರುತ್ತದೆ. ಹಳೆ ಸಮಸ್ಯೆ ಪೂರ್ಣಗೊಳ್ಳುವ ವೇಳೆಗಾಗಲೇ ಮತ್ತೊಂದು ಸಮಸ್ಯೆ ತಲೆ ಎತ್ತಿರುತ್ತದೆ. ಆದ್ದರಿಂದ, ಸದ್ಯ ಹೊಸ ಕಾಮಗಾರಿಗಳ ನಿರ್ಮಾಣದ ಬಗ್ಗೆ ಗಮನಹರಿಸದೆ ಸದ್ಯ ಯುಜಿಡಿ, ಕುಡಿಯುವ ನೀರು ಸರಬಾರಜು, ಪೈಪ್‌ಗಳ ಅಳವಡಿಕೆ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಪಾಲಿಕೆಯ ಎಲ್ಲ ವಲಯಗಳಲ್ಲಿ ಸೇರಿ ಒಂದು ದಿನಕ್ಕೆ ನಾಲವತ್ತು ದೂರುಗಳು ಸಲ್ಲಿಕೆಯಾಗುತ್ತಿವೆ. ಒಂದು ದಿನದ ದೂರುಗಳು ಉಳಿಸಿಕೊಂಡರೆ ಮರುದಿನ ಎರಡರಷ್ಟು ಏರಿಕೆಯಾಗುತ್ತವೆ. ಆದ್ದರಿಂದ, ಎಂಜನಿಯರ್‌ಗಳು ಬೆಳ್ಳಗೆಯಿಂದ ಕಚೇರಿ ಕೆಲಸ ಬಿಟ್ಟು ಹೊರಗಿನ ನಿರ್ವಹಣೆಗೆ ಸಮಯ ಮೀಸಲು ಇಟ್ಟಿರುತ್ತಾರೆ. ಅಲ್ಲದೆ, ಯುಜಿಡಿ ನಿರ್ವಹಣೆಗೆ ಸೂಪರ್ ವೈಸರ್, ವರ್ಕ್ ಇನ್ಸ್‌ಪೆಕ್ಟರ್ ಹಾಗೂ ಕುಡಿಯುವ ನೀರು ಸರಬರಾಜು ಗುಣಮಟ್ಟ ಪರಿಶೀಲನೆ ಅಧಿಕಾರಿಗಳು ಇಲ್ಲದೆ ಇರುವುದರಿಂದ ಈ ಎಲ್ಲ ಕೆಲಸಗಳು ಎಂಜನಿಯರ್‌ಗಳ ಮೇಲೆ ಇದೆ. 45 ಎಂಜನಿಯರ್‌ಗಳಲ್ಲಿ ಅರ್ಧದಷ್ಟು ಇದ್ದರೂ ನಿರ್ವಹಿಸಬಹುದು. ಸದ್ಯ ಪಾಲಿಕೆಯು ವೆಂಟಲೇಟರ್‌ನಲ್ಲಿದ್ದಂತೆ. ಆದರೆ, ಸಭೆಯಲ್ಲಿ ಪಾಲಿಕೆ ಸದಸ್ಯರು ಮಾತ್ರ ಸೂಪರ್ ಫಾಸ್ಟ್ ನಲ್ಲಿಯೇ ಪೂರ್ಣಗೊಳ್ಳಬೇಕು ಎಂಬುದಾಗಿ ಒತ್ತಡ ಏರುತ್ತಾರೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.

ಆಡಳಿತ ಪಕ್ಷದವರೆ ಸರ್ಕಾರ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ, ನಗರ ಶಾಸಕರು ಕೂಡ ಕಾಂಗ್ರೆಸ್ ಪಕ್ಷದವರೇ ಆಗಿರುವುದರಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆದ್ದರಿಂದ, ಅಗತ್ಯ ಎಂಜನಿಯರ್‌ಗಳ ಕೂಡಲೇ ನೇಮಕ ಮಾಡಿಕೊಳ್ಳಬೇಕು. ಇದೆಲ್ಲ, ಬಿಟ್ಟು ಕೇವಲ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದಾಗಿ ಪಾಲಿಕೆ ಸದಸ್ಯರು ಅವರ ವಿರುದ್ಧ ಕೋಪಗೊಂಡರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಬಿಜೆಪಿಯ ಪಾಲಿಕೆ ಸದಸ್ಯರೊಬ್ಬರು ಪ್ರಶ್ನಿಸಿದರು.

ಕೋಟ್... ಪಾಲಿಕೆಯಲ್ಲಿ ಎಂಜನಿಯರ್ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ.

- ಖಲೀಲ್ ಸಾಬ್, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ