ಜಿಲ್ಲೆ

ಕಸಾಪ ಗರಿಗೆದರದ ಚಟುವಟಿಕೆ

ಬಳ್ಳಾರಿ : ಬರೋಬ್ಬರಿ ಆರು ದಶಕಗಳ ಬಳಿಕ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥ್ಯ ಗಣಿನಾಡು ಖ್ಯಾತಿಯ ಜಿಲ್ಲೆಗೆ ಒಲಿದಿದ್ದು ಕನ್ನಡ ಪ್ರೇಮಿಗಳಿಗೆ ಸಂತಸ ತಂದಿತ್ತು. ಡಿಸೆಂಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಮ್ಮೇಳನಕ್ಕೆ ಇನ್ನೂ ಕೇವಲ ಮೂರು ತಿಂಗಳೇ ಬಾಕಿ ಉಳಿದಿದೆ. ಆದರೆ, ಈವರೆಗೆ ಯಾವುದೇ ಚಟುವಟಿಕೆಗಳು ಗರಿಗೆದರಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲಿನ ಭ್ರಷ್ಟಾಚಾರದ ಆರೋಪ, ತನಿಖೆ, ಆರೋಪ ಮಾಡಿದವರ ವಿರುದ್ಧ ಪರಿಷತ್ತಿನ ಅಧ್ಯಕ್ಷರ ಕಾನೂನು ಹೋರಾಟ ಸೇರಿದಂತೆ ಹಲವು ಬಗೆ ಗೊಂದಲಗಳಿಂದ ನೇರವಾಗಿ ಸಮ್ಮೇಳನದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಜಿಲ್ಲಾಡಳಿತ ಹಾಗೂ ರಾಜ್ಯ ಕಸಾಪದೊಂದಿಗೆ ಸಭೆ ನಡೆಸಿದ್ದೂ ಬಿಟ್ಟರೆ ಈವರೆಗೆ ಜಿಲ್ಲೆಗೆ ಭೇಟಿ ನೀಡಿ ಕಸಾಪ ಪದಾಧಿಕಾರಿಗಳೊಂದಿಗೆ ಚರ್ಚಿಸಿಲ್ಲ.

ಸ್ಥಳ ಗುರುತಿಸಿಲ್ಲ : ಜಿಲ್ಲೆಯಲ್ಲಿ ನಡೆಯುವ 88ನೇ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿ ಜಿಲ್ಲಾ ಕಸಾಪದಿಂದ ಕೆಲ ತಿಂಗಳ ಹಿಂದಯೇ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣ ಬಳಿ, ತಾಳೂರು ರಸ್ತೆಯ ವಿಶಾಲ ಪ್ರದೇಶ ಹಾಗೂ ವಿಎಸ್‌ಕೆ ವಿವಿ ಮುಂಭಾಗದಲ್ಲಿನ ಖಾಲಿ ಸ್ಥಳ ಗುರುತಿಸಿದೆ. ನಗರ ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ಬಹುತೇಕ ವಿಎಸ್‌ಕೆ ವಿವಿ ಸ್ಥಳ ಆಯ್ಕೆಯಾಗುವ ಸಾಧ್ಯತೆಯಿದೆ. ಅದೇ ಸ್ಥಳ ನಿಗದಿಯಾದರೂ ನೂರರು ಎಕರೆ ಪ್ರದೇಶದಲ್ಲಿ ಜಾಲಿ ಬೆಳೆದಿದ್ದು ಸ್ವಚ್ಛತೆಗೊಳಿಸಲು ಕನಿಷ್ಠ ಒಂದು ತಿಂಗಳು ಹಿಡಿಯಲಿದೆ ಎಂಬುದಾಗಿ ಸ್ಥಳೀಯರ ಅಭಿಪ್ರಾಯವಾಗಿದೆ.

ಅಧ್ಯಕ್ಷರ ಆಯ್ಕೆ, ಸಭೆ ಮಾತ್ರ ಸೀಮಿತ : ಪ್ರಸ್ತಕ ಸಾಲಿನ ಕಸಾಪ ಸಮ್ಮೇಳನ ಜಿಲ್ಲೆಗೆ ಘೋಷಣೆಯಾದ ಬಳಿಕ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ನೇತೃತ್ವದಲ್ಲಿ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಸಾಪ, ಸಂಘ ಸಂಸ್ಥೆಗಳೊಂದಿಗೆ ಸಭೆ ಹಾಗೂ ಕಸಾಪ ಕಾರ್ಯಾಕಾರಿಣಿ ಸಭೆಯಲ್ಲಿ ಬಾನುಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಬಿಟ್ಟರೆ ಇದರ ಹೊರತಾಗಿ ಸ್ವಾಗತಿ ಸಮಿತಿ ರಚನೆ, ಸ್ಥಳ ನಿಗದಿ ಸೇರಿದಂತೆ ನಾನಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಿಲ್ಲ. ಸಂಡೂರಿನಲ್ಲಿ ಆಯೋಜಿಸಿದ್ದ ಕಸಾಪ ವಾರ್ಷಿಕ ಸಭೆಯನ್ನು ನಾನಾ ಕಾರಣತರಂಗಳಿಂದ ಮುಂದೂಡಿ ರದ್ದುಗೊಳಿಸಲಾಯಿತು. ಆದರೆ, ಸಮ್ಮೇಳನ ಆಯೋಜನೆಗೆ ಕಾರ್ಯಕರ್ತರ ದೊಡ್ಡ ಪಡೆ ಬೇಕು. ಅವರನ್ನು ಏಕಾಏಕಿ ಹೊಂದಿಸಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಸೇವಾದಳದ ಸದಸ್ಯರನ್ನು ಪ್ರೇರೇಪಿಸಿಬೇಕು. ವಿಚಾರ ಗೋಷ್ಠಿಗಳ ವಿಷಯಗಳ ಕುರಿತು ಜನರ ಅಭಿಪ್ರಾಯ ಕೇಳಬೇಕು. ಜಿಲ್ಲೆಗೆ ಸಂಬಂಧಿಸಿದ ವಿಷಯ ಸಂಗ್ರಹಿಸಬೇಕು. ಸಮ್ಮೇಳನದ ಕುರಿತು ಈವರೆಗೆ ಒಂದೂ ಪರಿಣಾಮಕಾರಿ ಸಭೆ ನಡೆಯದೆ ಇರುವುದು ಆಶ್ಚರ್ಯ ಮೂಡಿಸಿದೆ.

ಬಾರದ ಸಚಿವ : ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಜಮೀರ್ ಅಹಮದ್ ಖಾನ್ ಜು. 22 ರಂದು ಕೆಡಿಪಿ ಸಭೆಗಾಗಿ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಸ್ಥಳದ ಪರಿಶೀಲನ ನಡೆಸಲು ನಿರ್ಧಾರಿಸಲಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳ ಅಲಭ್ಯತೆ ಕಾರಣದಿಂದ ಪ್ರವಾಸ ರದ್ದುಗೊಂಡಿತು. ಈಚೆಗೆ ಅಧಿವೇಶನ ಪೂರ್ಣಗೊಂಡ ಬಳಿಕ ಬರಬೇಕಿತ್ತು. ಆದರೆ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಸೆ. 5ರ ನಂತರ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಸಚಿವರ ಅಪ್ತರು ತಿಳಿಸಿದರು. ಅವಳಿ ಜಿಲ್ಲೆಯ ನೇತೃತ್ವದಲ್ಲಿ ನಡೆಯುವುದರಿಂದ ಎರಡು ಜಿಲ್ಲೆಯ ಪದಾಧಿಕಾರಿಗಳ ಒಳಗೊಂಡ ಸಮಿತಿ ರಚಿಸಿ ನಿರ್ವಹಣೆ ವಹಿಸಬೇಕಿದ್ದ ಸಚಿವರ ಮುಖ್ಯ ಜವಾಬ್ದಾರಿಯಾಗಿದೆ. ಒಟ್ಟಾರೆ, ಕಸಾಪ ಅಧ್ಯಕ್ಷ ವಿರುದ್ಧ ಆರೋಪಗಳ ಒಂದಡೆಯಾದರೆ, ಜಿಲ್ಲಾ ಉಸ್ತುವಾರಿ ಜಿಲ್ಲೆಯ ಕಡೆ ಮುಖ ಮಾಡದೆ ಇರುವುದು ಸಮ್ಮೇಳನಕ್ಕೆ ಹಿನ್ನಡೆಯಾಗುತ್ತಿದೆ ಎಂಬುದು ಹಲವರ ಮಾತಾಗಿದೆ.

ಕೋಟ್... ಜಿಲ್ಲೆಯಲ್ಲಿಯೇ ಕಸಾಪ ಸಮ್ಮೇಳನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಿ ಸ್ವಾಗತ ಸಮಿತಿ ರಚನೆ ಮಾಡುವ ವಿಶ್ವಾಸವಿದೆ. ಬಳಿಕ ಸಮ್ಮೇಳನದ ಚಟುವಟಕೆಗಳು ಆರಂಭವಾಗಲಿವೆ.

- ನಿಷ್ಠಿ ರುದ್ರಪ್ಪ, ಜಿಲ್ಲಾಧ್ಯಕ್ಷ, ಕಸಾಪ, ಬಳ್ಳಾರಿ.