ಬಳ್ಳಾರಿ: ಕರೊನಾ ನಿಯಂತ್ರಣಕ್ಕಾಗಿ ತಾಲೂಕಿನ ಕಪಗಲ್ಲು ಗ್ರಾಮಸ್ಥರು ಸ್ವಯಂ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ಗ್ರಾಪಂ ಹಾಗೂ ಜಿಲ್ಲಾಡಳಿತ ಆಕ್ಷೇಪಿಸಿದ್ದು, ನಿಯಮ ಮೀರಿ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದರ ನಡುವೆಯೂ ಕಪಗಲ್ಲು ಗ್ರಾಮಸ್ಥರು ಮಾತ್ರ ಗ್ರಾಪಂ ಸದಸ್ಯರೊಂದಿಗೆ ಸಭೆ ಸೇರಿ ಚರ್ಚಿಸುವ ಮೂಲಕ ಗ್ರಾಮಕ್ಕೆ ಸ್ವಯಂ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಗುರುವಾರದಿಂದ ಹದಿನೈದು ದಿನಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಿದ್ದು, ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಊರಿಂದ ಹೊರಗೆ ಹೋಗುವುದು ಗುಂಪಾಗಿ ಸೇರುವಂತಿಲ್ಲ. ಅಂಗಡಿ, ಹೋಟೆಲ್ ತೆರೆಯುವಂತಿಲ್ಲ. ನಿಯಮ ಮೀರಿದರೆ ಐದು ಸಾವಿರ ರೂ. ದಂಡ ವಿಧಿಸಲಾಗುವುದೆಂದು ಡಂಗುರ ಸಾರಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಪ್ಪಗಲ್ಲು ಗ್ರಾಪಂ ಅಧ್ಯಕ್ಷೆ ಪಾರ್ವತಿ, ಗ್ರಾಮದಲ್ಲಿ ಈವರೆಗೆ 23 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಬಲಿಯಾಗಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಗ್ರಾಮದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಕಪ್ಪಗಲ್ಲು ಹಾಗೂ ಬಸವೇಶ್ವರ ಕ್ಯಾಂಪ್‌ನಲ್ಲಿ ಸ್ವಯಂ ಪ್ರೆರಿತವಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಗ್ರಾಮದ ಜನರ ಹಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಪಿಡಿಒ ಜುಬೇದಾ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಗ್ರಾಪಂನಿಂದ ಲಾಕ್‌ಡೌನ್ ಘೋಷಿಸಿಲ್ಲ. ಸರ್ಕಾರದ ನಿಯಮ ಪ್ರಕಾರ ಕರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.