ಬಳ್ಳಾರಿ: ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿ ಗ್ರಾಮ ಮಟ್ಟದಲ್ಲಿ ರೋಗದ ಲಕ್ಷಣ ಉಳ್ಳವರನ್ನು ಗುರುತಿಸಿ, ಕಫ ಅಥವಾ ಇತರ ಪರೀಕ್ಷೆಗಳನ್ನು ಸಕಾಲದಲ್ಲಿ ಕೈಗೊಂಡು ಕ್ಷಯಮುಕ್ತ ಜಿಲ್ಲೆಯನ್ನಾಗಿಸುವ ಜತೆಗೆ ಕ್ಷಯಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸವರಾಜ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶನದಂತೆ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಧಾನಮಂತ್ರಿಗಳ ಆಶಯದಂತೆ 2025ರ ವೇಳೆಗೆ ಭಾರತವನ್ನು ಕ್ಷಯಮುಕ್ತವಾಗಿಸಲು ಟಿಬಿ ಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ಎಂಬ ಘೋಷಣೆಯೊಂದಿಗೆ ನಾವೆಲ್ಲರೂ ಪಣತೊಡಬೇಕಿದೆ ಎಂದರು.
ಈಗಾಗಲೇ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ಸದಸ್ಯರಿಗೆ ಸಾಂಕ್ರಾಮಿಕ ರೋಗಗಳ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ. ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ , ಕ್ಷಯರೋಗ ಪರೀಕ್ಷೆ ಮಾಡಲಾಗುತ್ತಿದ್ದು, ಜನತೆಗೆ ಜಾಗೃತಿ ನೀಡುವ ಮೂಲಕ ಹೆಚ್ಚು ಪರೀಕ್ಷೆಗಳನ್ನು ಕೈಗೊಂಡು ಕ್ಷಯಮುಕ್ತ ಗ್ರಾಮ ಪಂಚಾಯಿತಿ ಘೋಷಣೆಗಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ್ ಮಾತನಾಡಿ, ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು ಇದ್ದರೆ ಅದು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ.
ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಮೈ ಬೆವರುವುದು, ಎದೆ ನೋವು, ಕೆಲವೊಮ್ಮೆ ಕಫದ ಜತೆ ರಕ್ತ ಬೀಳುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೆ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಭೇದಿ, ಕುತ್ತಿಗೆ ಬಗಲುಗಳಲ್ಲಿ ಗಡ್ಡೆ ಇತರ ಲಕ್ಷಣಗಳಿದ್ದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷಯರೋಗಿಗಳ ಪತ್ತೆ ಮತ್ತು ರೋಗ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕ್ಷೇತ್ರ ಮಟ್ಟದಲ್ಲಿ ಕ್ಷಯರೋಗಿಗಳ ಅನುಸರಣೆ ಮಾಡುತ್ತಿದ್ದಾರೆ ಹಾಗೂ ಚಿಕಿತ್ಸೆಯೂ ಪರಿಣಾಮಕಾರಿಯಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಹೆಚ್ಚಾಗಿದ್ದು, ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗದಿಂದ ರಾಷ್ಟ್ರೀಯ ಕಾರ್ಯತಂತ್ರ ಯೋಜನೆಯಡಿ ಗುರುತಿಸಲಾಗಿದೆ.
ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ದಾನಿಗಳಿಂದ 584 ಜನರಿಗೆ ಪೌಷ್ಟಿಕ ಆಹಾರ ಕಿಟ್ ಒದಗಿಸಲಾಗಿದ್ದು, ಯಾವುದಾದರೂ ಸಂಘ-ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರಬೇಕೆಂದು ಕೋರಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ವಿ. ಇಂದ್ರಾಣಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಆರ್. ಅನೀಲಕುಮಾರ, ಡಾ.ವೀರೇಂದ್ರಕುಮಾರ, ಡಾ.ಹಂಸವೇಣಿ, ಡಾ.ಸಂಗೀತಾ, ಸಂಡೂರು ತಾಪಂ ಇಒ ಷಡಕ್ಷರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಾಕುಮಾರಿ, ಡಾ.ಈರಣ್ಣ, ಡಾ.ರಾಧಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಕ್ಷಯರೋಗ ವಿಭಾಗದ ಉದಯಕುಮಾರ, ಪಂಪಾಪತಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತಿತರರಿದ್ದರು.