ಬಳ್ಳಾರಿ : ತಾಲೂಕಿನ ಸಂಜೀವರಾಯನ ಕೋಟೆ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಜೀನ್ಸ್ ಅಪೆರಲ್ ಪಾರ್ಕ್ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ಕಾರ್ಯಕ್ರಮ ಸನಿಹಗೊಂಡಿದೆ. (ಸ್ಟೋರಿ ಬೆಂಗಳೂರಿಗೆ )
ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಹಾಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಅಪೆರಲ್ ಪಾರ್ಕ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಈಗಾಗಲೇ ಸ್ಥಳೀಯ ಉದ್ಯಮದಾರರ ಜತೆ, ಜಿಲ್ಲಾಡಳಿತ, ಕೆಐಎಡಿಬಿ, ಕೈ ಮಗ್ಗ ಮತ್ತು ಜವಳಿ ಇಲಾಖೆಯೊಂದಿಗೆ ಎರಡು ಸಭೆ ನಡೆಸಿದ್ದು ಜೀನ್ಸ್ ಘಟಕಗಳು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಗ್ರಾಮದಲ್ಲಿ 154 ಎಕರೆ ಭೂಮಿಯನ್ನು ಎಕರೆಗೆ 40 ಲಕ್ಷ ರೂ. ನಂತೆ ಸ್ವಾಧೀನಪಡಿಸಿಕೊಂಡಿದೆ. ಈ ಸ್ಥಳದಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಉತ್ಪಾದನೆಯ ಹಂತಗಳಾದ ಸ್ಟಿಚಿಂಗ್, ವಾಷಿಂಗ್, ಐರಾನ್, ಪ್ಯಾಕಿಂಗ್ ಮಾರಾಟವನ್ನು ಒಂದೇ ಸೂರಿನಡಿ ತರುವುದೆ ಯೋಜನೆಯ ಮುಖ್ಯ ಉದ್ದೇಶವಾಗಿದೆ.
25 ಕೋಟಿ ರೂ. ಟೆಂಡರ್ : ಜೀನ್ಸ್ ಅಪೆರಲ್ ಪಾರ್ಕ್‌ಗೆ ಪ್ರಾಥಮಿಕವಾಗಿ ವಿದ್ಯುತ್, ಸಾರಿಗೆ, ಕುಡಿವ ನೀರು, ತ್ಯಾಜ್ಯ ನಿರ್ವಹಣಾ ಘಟಕ, ಸಂಪರ್ಕ ವ್ಯವಸ್ಥೆ, ಹಣಕಾಸು ಸೇವೆ ಸೇರಿದಂತೆ ಕೆಐಡಿಎಬಿ ಮೂಲಭೂತ ಸೌಕರ್ಯ ಉದ್ದೇಶಿಸಲಾಗಿದೆ. ಸದ್ಯ, ಅಪೆರಲ್ ಪಾಕ್‌ನಲ್ಲಿ 154 ಎಕರೆ ಪ್ರದೇಶದಲ್ಲಿ ಎಲ್ಲ ಮಳಿಗೆಗಳಿಗೆ ವಾಹನಗಳ ಸಂಚಾರಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಸುಸ್ಸಜ್ಜಿತ ರಸ್ತೆ ನಿರ್ಮಿಸಲು ಉದ್ದೇಶಿಸಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ, ಪಾರ್ಕ್‌ನಲ್ಲಿಯೇ ಉದ್ದಿಮದಾರರ ಅನುಕೂಲಕ್ಕಾಗಿಯೇ ಸಾಮಾನ್ಯ ಸೌಲಭ್ಯ ಕಟ್ಟಡ ನಿರ್ಮಿಸಲು ಡಿಪಿಆರ್ ಸಿದ್ಧಗೊಳಿಸಿದ್ದು ಟೆಂಡರ್ ಹಂತದಲ್ಲಿದೆ. ಕೆಲ ದಿನಗಳಲ್ಲೇ ಎಲ್ಲ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗಳು ತ್ವರಿತಗತಿಯಲ್ಲಿ ಪ್ರಾರಂಭವಾಗಲಿದೆ. ಉತ್ತಮ ಮೂಲಭೂತ ಸೌಕರ್ಯಗಳಿರುವ ಪ್ರದೇಶದಲ್ಲಿ ಹೂಡಿಕೆ ಹೆಚ್ಚಾಗಿ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ. ಆದ್ದರಿಂದ, ಪ್ರತಿ ಎಕರೆಗೆ ಉದ್ಯಮದಾರರಿಗೆ ಸರ್ಕಾರದಿಂದ 1.35 ಕೋಟಿ ರೂ. ದರ ನಿಗದಿ ಮಾಡಲಾಗಿದೆ ಎಂದು ಕೆಐಎಡಿಬಿ ಮೂಲಗಳು ತಿಳಿಸಿದವು.
ಸೌಕರ್ಯ ಒದಗಿಸದರೆ ಮಾತ್ರ ಶಿಫ್ಟ್ : ಕಳೆದ ಕೆಲ ವರ್ಷಗಳ ಹಿಂದೆ ಸರ್ಕಾರದ ಆಶ್ವಾಸನೆಯ ಮಾತುಗಳು ನಂಬಿ ಇಲ್ಲಿನ ಮುಂಡರಗಿ ಲೇಔಟ್‌ನಲ್ಲಿ ಜೀನ್ಸ್ ವಾಷಿಂಗ್ ಘಟಕಗಳು ಪ್ರಾರಂಭಿಸಲಾಯಿತು. ಆದರೆ, ಮೂಲಭೂತ ಸೌಕರ್ಯ ಒದಗಿಸದ ಪರಿಣಾಮ ಉದ್ಯಮದಾರರು ನಷ್ಟ ಹೊಂದಿದ್ದಾರೆ. ಆದ್ದರಿಂದ, ತಾಲೂಕಿನ ಸಂಜೀವರಾಯನ ಕೋಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜೀನ್ಸ್ ಅಪೆರಲ್ ಪಾರ್ಕ್‌ನಲ್ಲಿ ತ್ಯಾಜ್ಯ ನೀರು ಸಂಸ್ಕ್ರರಣಾ ಘಟಕ, ಆಗ್ನಿಶಾಮಕ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಳೀಯ ಪೊಲೀಸ್ ಠಾಣೆ, ಶೌಚಾಲಯ, ಕುಡಿವ ನೀರು, ಸಾರಿಗೆ ವ್ಯವಸ್ಥೆ, ಸುಸ್ಸಜ್ಜಿತ ರಸ್ತೆ, ವಿದ್ಯುತ್ ಸಂಪರ್ಕ, ಬ್ಯಾಂಕಿಂಗ್ ಸೇವೆ, ಒಳಚರಂಡಿ, ಕೂಲಿ ಕಾರ್ಮಿಕರಿಗೆ ವಸತಿ ಕಟ್ಟಡಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸದರೆ ಮಾತ್ರ ಅಪೆರಲ್ ಪಾರ್ಕ್‌ಗೆ ಸ್ಥಳಾಂತರಗೊಳ್ಳಲಿದ್ದೇವೆ ಎಂದು ಜೀನ್ಸ್ ಉದ್ಯಮದಾರ ವೇಣುಗೋಪಾಲ್ ತಿಳಿಸಿದರು.
ಕೋಟ್.. ಜೀನ್ಸ್ ಅಪರೆಲ್ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣದ ಬಗ್ಗೆ ಡ್ರಾಫ್ಟ್ ರೆಡಿಯಾಗಿದೆ ಎಂಬ ಮಾಹಿತಿಯಿದೆ. ಹಂತ ಹಂತವಾಗಿ ಕಾಮಗಾರಿಗಳು ಪ್ರಾರಂಭವಾಗಲಿದೆ. ಹೆಚ್ಚಿನ ವಿವರ ಕೆಐಎಡಿಬಿ ಬಳಿಯಿದೆ.
- ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.