ಜಿಲ್ಲೆ

ನೂತನ ಸಂಶೋಧನೆಗಳಿಗೆ ಐಯುಎಸಿ ಕೇಂದ್ರ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸುರಕ್ಷತೆ, ಭದ್ರತೆ ಅಥವಾ ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡದ ಕೌಶಲ್ಯ ಹೆಚ್ಚಿಸಲು ಐಯುಎಸಿ (ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ) ಯು ನಿರಂತರವಾಗಿ ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿದೆ ಎಂದು ಕಲಬುರಗಿಯ ಭೌತಶಾಸ್ತ್ರ ನಿ.ಪ್ರೊ. ಎಂ ಟಿ ಲಗಾರೆ ಹೇಳಿದರು.

ನಗರದ ವಿಎಸ್‌ಕೆ ವಿವಿಯಲ್ಲಿ ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ ಹಾಗೂ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಯೋದೊಂದಿಗೆ ಮಂಗಳವಾರ ಆಯೋಜಿಸಿದ್ದ ಐಯುಎಸಿ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇಗವರ್ಧಕ ಭೌತಶಾಸ್ತ್ರವು ಕಣ ವೇಗವರ್ಧಕಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಿದ ಭೌತಶಾಸ್ತ್ರದ ವಿಶೇಷ ಕ್ಷೇತ್ರವಾಗಿದ್ದು, ಇದರ ಜತೆಯಲ್ಲೆ ಪರಮಾಣು ಭೌತಶಾಸ್ತ್ರವು ಪರಮಾಣು ನ್ಯೂಕ್ಲಿಯರ್ಸ್‌ಗಳ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮೂಲಭೂತ ಶಕ್ತಿಗಳು ಮತ್ತು ಅವುಗಳಿಗೆ ಒಳಗಾಗುವ ಪ್ರತಿಕ್ರಿಯೆಗಳು, ವಿಕಿರಣಶೀಲ ಕೊಳೆತ, ವಿದಳನ ಮತ್ತು ಸಮ್ಮಿಲನಗಳನ್ನು ನೀಡುತ್ತವೆ. ಇವುಗಳ ಹೆಚ್ಚಿನ ಅಧ್ಯಯನಕ್ಕೆ ಹಾಗೂ ಸಂಶೋಧನೆಗೆ ಐಯುಎಸಿ ಕೇಂದ್ರವು ವೇದಿಕೆಯಾಗಿದೆ ಎಂದು ತಿಳಿಸಿದರು.

ನವದೆಹಲಿಯ ಐಯುಎಸಿ ವಿಜ್ಞಾನಿ ಡಾ. ಫೌರನ ಸಿಂಗ್ ಮಾತನಾಡಿ, ವೇಗವರ್ಧಕ ಮಾಸ್ ಸ್ಪೆಕ್ಟ್ರೋಮೆಟ್ರಿ ಮತ್ತು ಭೂಕಾಲಗಣನ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮೊದಲನೆ ಕೇಂದ್ರವಾಗಿ ಐಯುಎಸಿ ಕಾರ್ಯನಿರ್ವವಹಿಸುತ್ತಿದೆ. ಈ ಕೇಂದ್ರದ ಪ್ರಯೋಜನ ಪಡೆಯಲು ಯುವ ಸಂಶೋಧಕರು ಹೊಸ ಸಂಶೋಧನೆಗಳೊಂದಿಗೆ ಬರಬೇಕು ಎಂದು ಕರೆ ನೀಡಿದರು.

ಮೈಸೂರು ವಿವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎ.ಪಿ. ಜ್ಞಾನಪ್ರಕಾಶ ಮಾತನಾಡಿ, ಉನ್ನತ ಮಟ್ಟದ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಐಯುಎಸಿ ಹೊಂದಿದೆ. ವಿವಿಯಲ್ಲಿನ ಭೌತಶಾಸ್ತ ವಿಭಾಗವು ಹಲವು ವೈವಿಧ್ಯತೆಗಳೊಂದಿಗೆ ಕೂಡಿದ್ದು, ರಾಜ್ಯದಲ್ಲಿನ ಉಳಿದ ವಿವಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಕಲ್ಯಾಣ- ಕರ್ನಾಟಕ ಭಾಗದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ವಿವಿಯಲ್ಲಿ ನಿರ್ಮಿಸಲಾಗುವುದಾಗಿ ಹೇಳಿದರು. ಯುವ ಸಂಶೋಧಕರು ಐಯುಎಸಿ ಕೇಂದ್ರದ ಪ್ರಯೋಜನ ಪಡೆಯಬೇಕೆಂದು ಹೇಳಿದರು.

ದೇಶದ ನಾನಾ ರಾಜ್ಯಗಳ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.