ಜಿಲ್ಲೆ

ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿ

ಬಳ್ಳಾರಿ : ಮಕ್ಕಳು ಮತ್ತು ಹದಿಹರೆಯದವರು ಜಂತುಹುಳು ನಿವಾರಕ ಮಾತ್ರೆಯನ್ನು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.

ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಜಿಲ್ಲಾಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ ಅನೀಮಿಯ(ರಕ್ತಹೀನತೆ)ಯನ್ನು ತಡೆಗಟ್ಟಲು ಎಲ್ಲ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಮಾತ್ರೆಯನ್ನು ಚೀಪಿಸುವುದರ ಮೂಲಕ ಸೇವನೆ ಮಾಡಬಹುದಾಗಿದೆ ಎಂದು ತಿಳಿಸಿದರು. ಮಕ್ಕಳು ಮತ್ತು ಹದಿಹರೆಯದವರು ಶುಚಿತ್ವ ಕಾಪಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೇಶಕ ಡಾ.ಅಂಬರಾಯ ಎಸ್.ರುದ್ರವಾಡಿ ಮಾತನಾಡಿ, ಜಂತು ನಿವಾರಣೆಯಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆಗೊಳ್ಳುತ್ತದೆ. ಜಂತು ಹುಳು ನಿವಾರಣಾ ಮಾತ್ರೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯ ಸುಧಾರಣೆ, ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಾರೆ. ಮಾತ್ರೆಯು ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ. ಅನೀಮಿಯ ಮುಕ್ತ ಭಾರತ ಹೊಂದುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಡಿಎಚ್‌ಒ ಡಾ.ವೈ. ರಮೇಶ್‌ಬಾಬು ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿನ ಮನೆ ಮನೆಗೆ ಭೇಟಿ ನೀಡುವ ಮೂಲಕ 5.83 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.

ಬಳಿಕ ರಾಷ್ಟ್ರೀಯ ಜಂತುಹುಳು ನಿವಾರಣಾ ಕುರಿತಾಗಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು ಮತ್ತು ಸಾಂಕೇತಿಕವಾಗಿ ಮಕ್ಕಳಿಗೆ ಮಾತ್ರೆಯನ್ನು ವಿತರಿಸಿ, ಚೀಪುವಂತೆ ತಿಳಿಸಲಾಯಿತು.