ಬಳ್ಳಾರಿ : ವಿಶ್ವವಿದ್ಯಾಲಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಮಾದರಿ ವಿವಿಯಾಗಿ ಮಾರ್ಪಡಿಸುವುದು ಧ್ಯೇಯ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಶಿಕ್ಷಣ ಮಹಾವಿದ್ಯಾಲಯಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಥಿಯೋಸಫಿಕಲ್ ಸೊಸೈಟಿ ಹಾಗೂ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ದೇವರುಗಳ ಸೇವೆಗಾಗಿ ಬ್ಯಾಟರಿ ಚಾಲಿತ ವಾಹನ ಹಾಗೂ ವಸತಿ ನಿಲಯ ಕಟ್ಟಡಗಳ ನವೀಕರಣ ಕಾಮಗಾರಿಗಳ ಉದ್ಘಾಟನೆ ಮತ್ತು 2025ರ ವರ್ಷಾರಂಭಕ್ಕೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೊಸವರ್ಷದಲ್ಲಿ ವಿವಿಯ ವಿದ್ಯಾರ್ಥಿಗಳು ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳಲು ಅಗತ್ಯವಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ದಾಸೋಹ ಭವನ ನಿರ್ಮಿಸಲಾಗುವುದು. ವಿವಿಯ ಅಭಿವೃದ್ಧಿಗೆ ಎಲ್ಲ ಸಿಬ್ಬಂದಿ ಕೈಜೋಡಿಸಬೇಕು ಎಂದು ಹೇಳಿದರು.
ವಿವಿ ಕುಲಸಚಿವ ಎಸ್.ಎನ್.ರುದ್ರೇಶ ಮಾತನಾಡಿ, ವಿವಿಯ ಮುಖ್ಯ ಆವರಣದಲ್ಲಿ ಬ್ಯಾಟರಿ ಚಾಲಿತ ವಾಹನದ ಸೇವೆಯನ್ನು ವಿದ್ಯಾರ್ಥಿಗಳಿಗಾಗಿಯೇ ಒದಗಿಸಿದೆ. ಈ ವಿನೂತನ ಸೇವೆಯನ್ನು ಆರಂಭಿಸಿರುವ ರಾಜ್ಯದ ಪ್ರಥಮ ವಿಶ್ವವಿದ್ಯಾಲಯ ನಮ್ಮದು. ಇದೇ ರೀತಿ ಹತ್ತು-ಹಲವು ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿ
ಸಹಕಾರ ಅಗತ್ಯ ಎಂದರು.
ಥಿಯೋಸಫಿಕಲ್ ಸೊಸೈಟಿಯ ನಿರ್ದೇಶಕ ಶರಣಪ್ಪ , ಕಾರ್ಯದರ್ಶಿ ಅಶೋಕ ಜೀರೆ, ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಗಿರೀಶ ಕುಲಕರ್ಣಿ, ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ರಾಜಶೇಖರ ಮಾತನಾಡಿದರು.
ಬಳಿಕ ಎರಡು ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.