ಬಳ್ಳಾರಿ : ಗಣಿತ ವಿಷಯವು ಕಬ್ಬಿಣದ ಕಡಲೆಯಲ್ಲ. ಬದಲಾಗಿ ಮೂಲ ಸೂತ್ರ ಅರಿತು, ಆಸಕ್ತಿಯಿಂದ ಕಲಿಯುವ ವಿಷಯವಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಎಸ್.ಎಂ. ವಾಗೀಶ್ ಶಿವಾಚಾರ್ಯ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಜಿಪಂ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ಮೇಧಾವಿಗಳ ಸ್ಮರಣೆಗಾಗಿ ವಿವಿಧ ದಿನಾಚರಣೆ ಮಾಡಲಾಗುತ್ತದೆ. ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರು ಅಪಾರ ಜ್ಞಾನ ಉಳ್ಳವರು. ಅವರು 32 ವಯಸ್ಸಿನಲ್ಲಿಯೇ ಯಶಸ್ಸಿನ ಛಲ ಹೊಂದಿ, ಸಾಧನೆಯ ಮೈಲಿಗಲ್ಲು ತಲುಪಿದವರು. ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ವಿದ್ಯಾರ್ಥಿಗಳು ತಳ ಮಟ್ಟದಲ್ಲಿಯೇ(ಬೇಸಿಕ್) ಗಣಿತ ವಿಷಯವನ್ನು ಅಚ್ಚುಕಟ್ಟಾಗಿ ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಮುಖ್ಯಗುರು ಎ.ಭೈರಪ್ಪ ಮಾತನಾಡಿ, ಗಣಿತ ವಿಷಯದ ಲೆಕ್ಕಚಾರ ತಿಳಿದುಕೊಂಡರೆ ದೈನಂದಿನದಲ್ಲಿ ಉತ್ತಮ ವ್ಯವಹಾರ ಜೀವನ ನಡೆಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಗಣಿತ ವಿಷಯ ಕಲಿಯುವಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ವಿವಿಧ ಆವಿಷ್ಕಾರ-ನೂತನ ಪ್ರಯೋಗಗಳಲ್ಲಿ ತೊಡಗಿಕೊಂಡು ಕೊಡುಗೆ ನೀಡಬೇಕು ಎಂದರು.
ಡಿಡಿಪಿಐ ಕಚೇರಿಯ ಗಣಿತ ವಿಷಯ ನಿರ್ವಾಹಕ ಎಂ.ಬಸವರಾಜ ಮಾತನಾಡಿ, ಗಣಿತ ವಿಷಯವು ಕ್ಲಿಷ್ಟಕರವಲ್ಲ. ಗಣಿತ ಜ್ಞಾನದಿಂದ ಮನೋವೃದ್ಧಿಯಾಗಲಿದ್ದು, ವಿದ್ಯಾರ್ಥಿಗಳು ಗಣಿತ ಪ್ರಾಮುಖ್ಯತೆ ಅರಿತುಕೊಂಡು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪಿಯುಸಿಯಲ್ಲಿ ಗಣಿತ ವಿಷಯ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಪ್ರೌಢಶಾಲೆಯಲ್ಲಿಯೇ ಗಣಿತ ವಿಷಯದ ಜ್ಞಾನ ಸಂಪಾದಿಸಿಕೊಂಡು, ಉನ್ನತ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ತಿಳಿಸಿದರು.
ಬಳಿಕ ಶಾಲಾ ವಿದ್ಯಾರ್ಥಿನಿಯರಿಂದ ತಯಾರಿಸಲ್ಪಟ್ಟ ಗಣಿತ ಮ್ಯಾಗಜಿನ್ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಷಣ ಮಾಡಿದ್ದು ವಿಶೇಷವಾಗಿತ್ತು