ಜಿಲ್ಲೆ

ಮಾರ್ಯಾದೆಗೇಡು ಹತ್ಯೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಇತ್ತೀಚಿಗೆ ಅನುಮಾನಸ್ಪದವಾಗಿ ಕೊಲೆಯಾಗಿದ್ದ ಯುವಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ವಿ.ಜೆ. ಶೋಭಾರಾಣಿ ತಿಳಿಸಿದರು.

ಇಲ್ಲಿನ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾರಾವಿ ಗ್ರಾಮದ ನಿವಾಸಿಗಳಾದ ಡಿ.ಮಲ್ಲಯ್ಯ (45), ಸುರೇಶ (21)ಬಂಧಿತರು. ಮೇಲಜಾತಿಯ ಯುವಕ, ಮೃತ ಮಂಜುನಾಥಗೌಡ ಕೆಳಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಹಲವು ಬಾರಿ ಯುವಕನಿಗೆ ಯುವತಿಯ ಕುಟುಂಬದವರೂ ಎಚ್ಚರಿಸಿದರೂ ಪ್ರೀತಿಯನ್ನು ಮುಂದುವರೆಸಿದ್ದ. ದ್ವೇಷ ಬೆಳೆಸಿಕೊಂಡಿದ್ದ ಕುಟುಂಬಸ್ಥರು ಯುವತಿಯ ಮೊಬೈಲ್‌ನಿಂದ ಯುವಕನಿಗೆ ಮೆಸೆಜ್ ಮಾಡಿ ಗ್ರಾಮದ ಹೊರವಲಯದ ಹುಣಸೆಮರದ ತೋಟಕ್ಕೆ ಕರೆಸಿಕೊಂಡು ಕುತ್ತಿಗೆಗೆ ಟವಲ್ ಬಿಗಿದು, ಮುಖಕ್ಕೆ ಸಲಿಕೆಯಿಂದು ಹೊಡೆದು ಸಾಯಿಸಿ ಹಗರಿ ನದಿಯ ದಡದಲ್ಲಿ ಹೂತು ಹಾಕಿದ್ದರು ಎಂದು ಹೇಳಿದರು. ಬಳಿಕ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ಮಗಳನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದರು. ಜ.7 ರಂದು ಮಂಜುನಾಥಗೌಡ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಹೋದರ ಹನುಮಂತಗೌಡ ಸಿರಗುಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿತರ ಪತ್ತೆ ಹಚ್ಚಿದ ತಂಡಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.